‘ಸರಕಾರ ಮತ್ತು ಸಮಾಜದಿಂದ ಆದಿವಾಸಿಗಳ ಶೋಷಣೆ’: ಪರ್ಯಾಯ ಶಿಕ್ಷಣ ಕುರಿತ ವಿಚಾರಗೋಷ್ಠಿ

Update: 2024-09-30 13:49 GMT

ಮಣಿಪಾಲ: ನಾಡಿನ ಆದಿವಾಸಿಗಳಿಂದ (ಬುಡಕಟ್ಟು ಜನಾಂಗ ದವರು) ಅವರ ಸಮುದಾಯದ ಮೌಲ್ಯಗಳು, ಹಾಡುಗಳು, ನೃತ್ಯ, ವೈದ್ಯಕೀಯ ವ್ಯವಸ್ಥೆ, ಪರಿಸರ ವಿಜ್ಞಾನದ ಪ್ರಪಂಚ ಕಲಿಯಲು ಬಹಳಷ್ಟು ವಿಷಯಗಳಿವೆ. ಆದರೆ ನಮ್ಮ ಸರಕಾರಗಳು ಹಾಗೂ ಸಮಾಜದಿಂದ ಅವರು ಸಮಾನವಾಗಿ ಶೋಷಿಸಲ್ಪಡುತ್ತಿದ್ದಾರೆ ಎಂದು ಮಣಿಪಾಲದ ಗಾಂಧಿಯನ್ ಸೆಂಟರ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದವರು ಪ್ರತಿಪಾದಿಸಿದರು.

ಮಣಿಪಾಲದ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಕೇರಳದ ಬಹುಮುಖ ಪ್ರತಿಭೆಯ ಬರಹಗಾರ, ನಾಟಕರಾರ, ಚಲನಚಿತ್ರ ನಿರ್ಮಾಪಕ ಹಾಗೂ ಪರ್ಯಾಯ ಶಿಕ್ಷಣದ ಪ್ರಯೋಗಶೀಲ ಕೆ.ಜೆ.ಬೇಬಿ ಅವರ ನೆನಪಿನಲ್ಲಿ ಆಯೋಜಿಸಲಾದ ಪರ್ಯಾಯ ಶಿಕ್ಷಣ ಕುರಿತ ಗೋಷ್ಠಿಯಲ್ಲಿ ಮಾತನಾಡಿದವರು ಈ ವಿಚಾರವನ್ನು ಮಂಡಿಸಿದರು.

ಆದಿವಾಸಿಗಳ ದೇಸಿ ಜ್ಞಾನ ಅಮೂಲ್ಯವಾದುದು. ಅವರಿಂದ ನಾವೆಲ್ಲರೂ ಕಲಿಯುವುದು ಬಹಳಷ್ಟಿದೆ. ಜೊತೆಗೆ, ಅವರು ಅನುಭವಿಸುತ್ತಿರುವ ಬವಣೆಯನ್ನು ಪರಿಹರಿಸುವದು ನಮ್ಮೆಲ್ಲರ ಜವಾಬ್ದಾರಿ ಸಹ ಆಗಿದೆ ಎಂದವರು ಅಭಿಪ್ರಾಯಪಟ್ಟರು.

ಆದಿವಾಸಿಗಳನ್ನು ಸಮಾಜ ಸರಿಯಾಗಿ ಅರ್ಥೈಸಿಕೊಳ್ಳದ ಕಾರಣ ಅವರು ‘ಕಾನೂನು ಶೋಷಣೆ’ಗೂ ಒಳಗಾಗುತ್ತಿದ್ದಾರೆ ಎಂದು ಅವರು ವಿವರಿಸಿದರು. ವಿವಿಧ ಕ್ಷೇತ್ರಗಳ ತಜ್ಞರಾದ ಪ್ರೊ.ಕೆ ಶಂಕರನ್, ಡಾ. ಹರಿ ಪಿ ಜಿ, ಅನಿತಾ ಇ ಎ, ವಕೀಲರಾದ ಮಿನಿ ಎಂ ಆರ್, ಏಕ್ತಾರಾ, ಸುಧಿ ಎಸ್, ಡಾ. ಶ್ರೀಕುಮಾರ್, ಪ್ರೊ.ಮೋಹನಕುಮಾರ್ ವಿ, ಪ್ರೊ. ವರದೇಶ್ ಹಿರೇಗಂಗೆ, ಡಾ.ರೆಸ್ಮಿ ಭಾಸ್ಕರನ್, ಡಾ.ದೆಬ್ರಾಯ್, ಅಪರ್ಣಾ ಪರಮೇಸ್ವರನ್ ಇದರಲ್ಲಿ ಪಾಲ್ಗೊಂಡಿದ್ದರು.

ಜಿಸಿಪಿಎಎಸ್, ಸಹೃದಯ ಸಂಗಮಮ್ ಮತ್ತು ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪರ್ಯಾಯ ಶಿಕ್ಷಣ ಗೋಷ್ಠಿ, ಸಾಕ್ಷ್ಯಚಿತ್ರ ಪ್ರದರ್ಶನ, ಆದಿವಾಸಿಗಳ ಗೀತೆಗಳ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಾ.ಹರಿ ಪಿ.ಜಿ ಹಾಗೂ ಅನಿತಾ ಇ.ಎ. ಅವರು ಕೇರಳದ ವಯನಾಡಿನಲ್ಲಿ ಕೆ.ಜೆ.ಬೇಬಿ ನಡೆಸುತ್ತಿದ್ದ ಆದಿವಾಸಿಗಳ ಶಾಲೆ ’ಕನವು’, ಅಲ್ಲಿ ಆದಿವಾಸಿಗಳನ್ನು ಶೋಷಿಸುತ್ತಿರುವ ಕಾನೂನು ಜಾರಿ ಸಂಸ್ಥೆಗಳ ಬಗ್ಗೆ ಮಾತನಾಡಿದರು. ಮಿನಿ ಎಂ.ಆರ್, ಏಕ್ತಾರಾ ಮತ್ತು ಸುಧಿ ಎಸ್. ಆದಿವಾಸಿಗಳ ಹಾಡುಗಳನ್ನು ಹಾಡಿ ಕುಣಿದರು.

ಕಳೆದ ಸೆ.೧ರಂದು ನಿಧನರಾದ ಕೆ.ಜೆ.ಬೇಬಿ ಅವರ ಶೈಕ್ಷಣಿಕ ಪ್ರಯೋಗ ‘ಕನವು’ (ಕನಸು) ಚಲನಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಬಳಿಕ ಅದರ ಕುರಿತು ಸಂವಾದ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News