ಉಡುಪಿ ನಗರದಲ್ಲಿ ಸರಣಿ ಕಳ್ಳತನ: ಸರಕಾರಿ ನೌಕರರ 6 ವಸತಿ ಗೃಹಗಳಿಗೆ ನುಗ್ಗಿದ ಕಳ್ಳರು
ಉಡುಪಿ: ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ವಸತಿ ಸಮುಚ್ಛಯದ ಆರು ಮನೆಗಳಿಗೆ ರವಿವಾರ ರಾತ್ರಿ ವೇಳೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ನೆಲ ಸೇರಿದಂತೆ ಮೂರು ಮಹಡಿಯ ವಸತಿ ಸಮುಚ್ಚಯದಲ್ಲಿ ವಿವಿಧ ಇಲಾಖೆಗಳ ಸರಕಾರಿ ನೌಕರರ ಕುಟುಂಬಗಳು ವಾಸವಾಗಿದ್ದು, ಶನಿವಾರ ಮತ್ತು ರವಿವಾರ ರಜೆ ಇದ್ದ ಕಾರಣ ಇಲ್ಲಿನ ಆರು ಮನೆಯವರು ಮನೆಗೆ ಬೀಗ ಹಾಕಿ ತಮ್ಮ ಊರಿಗೆ ತೆರಳಿದ್ದರೆಂದು ತಿಳಿದು ಬಂದಿದೆ.
ಈ ಸಮುಚ್ಛಯದಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಫ್ಲೇವಿಯಾ ಡಿಸೋಜ ಎಂಬವರು ಸೆ.28ರಂದು ಸಂಜೆ ಮನೆಗೆ ಬೀಗ ಹಾಕಿ ಕಡೆಕಾರ್ ನಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಕರ್ತವ್ಯಕ್ಕೆ ಹೋಗಲು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಅದೇ ರೀತಿ ಇದೇ ಕಟ್ಟಡದಲ್ಲಿರುವ ಸರಕಾರಿ ನೌಕರ ವಾಸುದೇವ ಎಂಬವರು ಸೆ.28ರಂದು ಸಂಜೆ ಮನೆಗೆ ಬೀಗ ಹಾಕಿ ಸ್ವಂತ ಊರಾದ ಕೆಂಚನೂರಿಗೆ ಹೋಗಿದ್ದರು. ಸೆ.30ರಂದು ನೆರೆಮನೆಯ ಫ್ಲೆವಿಯಾ ಡಿಸೋಜ ಕರೆಮಾಡಿ ತಿಳಿಸಿದಾಗ ಮನೆಯಲ್ಲಿ ಕಳವು ಆಗಿರುವುದು ಕಂಡುಬಂದಿದೆ.
ಬಳಿಕ ಪರಿಶೀಲಿಸಿದಾಗ ಈ ಸಮುಚ್ಚಯದಲ್ಲಿರುವ ಆರು ಮನೆಗಳಿಗೆ ಕಳ್ಳರು ನುಗ್ಗಿರುವುದು ತಿಳಿದುಬಂದಿದೆ. ಈ ವಸತಿ ಸಮುಚ್ಛಯವು ಉಡುಪಿ ನಗರ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದು, ಈ ಕಳ್ಳತನ ನಗರದ ಜನತೆಯಲ್ಲಿ ಆತಂಕ ಸೃಷ್ಠಿಸಿದೆ.
ನಗ ನಗದು ಕಳವು: ಫ್ಲೇವಿಯಾ ಡಿಸೋಜ ಅವರ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೆಡ್ರೂಮಿನಲ್ಲಿದ್ದ ಗೋಡ್ರೇಜ್‌ನ ಸಿಕ್ರೆಟ್ ಲಾಕ್‌ನ್ನು ಒಡೆದು 20,000ರೂ. ನಗದು ಮತ್ತು 8,82,000ರೂ. ಮೌಲ್ಯದ ಅಂದಾಜು 126 ಗ್ರಾಂ ತೂಕದ ಚಿನ್ನಾಭರಣ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಅದೇ ರೀತಿ ವಾಸುದೇವ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೆಡ್ರೂಮಿನಲ್ಲಿದ್ದ ಗೋಡ್ರೆಜ್‌ನಲ್ಲಿಟ್ಟಿದ್ದ 25,000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಉಳಿದ ಮನೆಗಳ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಹುಡು ಕಾಟ ನಡೆಸಿರುವುದು ಕಂಡುಬಂದಿದೆ. ಈ ಮನೆಗಳಿಂದ ಯಾವುದೇ ವಸ್ತುಗಳು ಕಳವು ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನ ದಳ ಆಗಮಿಸಿ ತನಿಖೆ ನಡೆಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಸ್.ಟಿ.ಸಿದ್ಧಲಿಂಗಪ್ಪ, ಪಿ.ಎ.ಹೆಗಡೆ, ಡಿವೈಎಸ್ಪಿ ಡಿ.ಟಿ.ಪ್ರಭು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಣ್ಣೀರು ಹಾಕಿದ ಮನೆಯೊಡತಿ!
‘ಡೆಂಗ್ಯು ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇತ್ತೀಚೆಗೆ ಬಿಡುಗಡೆಯಾಗಿದ್ದೆ. ರಾತ್ರಿ ಮನೆಯಲ್ಲಿ ಒಬ್ಬಳೇ ಇರಲು ಸಾಧ್ಯವಾಗದ ಕಾರಣ ಶನಿವಾರ ಸಂಜೆ ಕಡೆಕಾರಿನಲ್ಲಿರುವ ಗೆಳತಿಯ ಮನೆಗೆ ಹೋಗಿದ್ದೆ. ಬೆಳಗ್ಗೆ ಕರ್ತವ್ಯಕ್ಕೆ ಹೋಗಲು ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಒಡೆದು ಕಳವು ಮಾಡಿರುವುದು ಕಂಡುಬಂತು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಫ್ಲೇವಿಯಾ ಡಿಸೋಜ ಕಣ್ಣೀರು ಹಾಕಿದರು.
ಇಲಾಖೆಯಲ್ಲಿ 29 ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾರಿಂದಲೂ ನಯಾಪೈಸೆ ಲಂಚ ಪಡೆದಿಲ್ಲ. ನನಗೆ ಈ ಗತಿ ಬಂದಿದೆ. ಡೆಂಗ್ಯು ಬಂದಾಗ ಹಣ ಬೇಕಾಗಬಹುದು ಎಂದು ಬ್ಯಾಂಕಿನಿಂದ 20ಸಾವಿರ ರೂ. ಡ್ರಾ ಮಾಡಿ ತಂದು ಇಟ್ಟಿದ್ದೆ. ಮನೆಯಲ್ಲಿದ್ದ ಎಲ್ಲ ಚಿನ್ನಾಭರಣ, ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.
‘ಕಂದಾಯ ಇಲಾಖೆಯ ಸರಕಾರಿ ವಸತಿ ಸಮುಚ್ಛಯವಾದರೂ ಇಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳಿಲ್ಲ. ಹಾಗಾಗಿ ಯಾರು ಕಳ್ಳರು ಬಂದಿದ್ದಾರೆ ಎಂದು ತಿಳಿಯುವುದು ಕೂಡ ಕಷ್ಟವಾಗಿದೆ. ನಗರದ ಮಧ್ಯೆ ಇದ್ದರೂ ಇಲ್ಲಿ ಯಾವುದೇ ದೀಪದ ವ್ಯವಸ್ಥೆ ಇಲ್ಲ. ನನ್ನ ನೆರೆಮನೆಯ ಫ್ಲೇವಿಯಾ ಅವರು ಕರೆ ಮಾಡಿ ಹೇಳಿದಾಗ ನಮ್ಮ ಸಮುಚ್ಛಯದಲ್ಲಿ ಕಳ್ಳತನ ಆಗಿರುವುದು ತಿಳಿದು ಬಂತು’
-ಸುರೇಶ್, ಸರಕಾರಿ ವಸತಿ ಗೃಹದ ನಿವಾಸಿ