ಶರಣ್‌ ಪಂಪ್‌ವೆಲ್‌ಗೆ ಉಡುಪಿ ಜಿಲ್ಲೆ ಪ್ರವೇಶಿಸದಂತೆ ತಡೆ; ಹೆಜಮಾಡಿಯಿಂದಲೇ ವಾಪಸ್

Sharan pumpwell prevented from entering Udupi district; The police sent him back from Hejamady

Update: 2023-10-10 10:44 GMT

ಉಡುಪಿ, ಅ.10: ವಿಎಚ್ ಪಿ- ಬಜರಂಗದಳ ವತಿಯಿಂದ ಇಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಹಾಗೂ ಹಿಂದೂ ಸಮಾಜೋತ್ಸವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇತ್ತೀಚೆಗೆ ನಡೆದ ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಪ್ರತಿಭಟನೆಯಲ್ಲಿ ಶರಣ್ ಪಂಪ್ವೆಲ್ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ಅವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಉಡುಪಿ ನ್ಯಾಯಾಲಯದ ಮೂಲಕ ಜಾಮೀನು ಪಡೆದುಕೊಂಡಿರುವ ಶರಣ್ ಪಂಪ್ವೆಲ್ ಗೆ ಯಾವುದೇ ಪೂರ್ವಾನುಮತಿ ಇಲ್ಲದೆ ದ.ಕ. ಜಿಲ್ಲೆ ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿತ್ತು. ಅದರಂತೆ ಪೊಲೀಸರು ಅವರಿಗೆ ಇಂದಿನ ಉಡುಪಿಯ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸದಂತೆ ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ರಥಯಾತ್ರೆಯು ಮಂಗಳೂರಿನಿಂದ ಉಡುಪಿ ಜಿಲ್ಲೆಗೆ ಪ್ರವೇಶಿಸಿದ್ದು, ಸಂಜೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ. ಇದರಲ್ಲಿ ಭಾಗವಹಿಸಿದರೆ ಅವರನ್ನು ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸರು ಬಂಧಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಅವರು ಉಡುಪಿ ಪೊಲೀಸರ ಆದೇಶದ ಬಗ್ಗೆ ತಿಳಿದು ಹೆಜಮಾಡಿಯಿಂದ ವಾಪಸ್ಸು ಆಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಎಸ್ಪಿ ಡಾ.ಅರುಣ್ ಕುಮಾರ್, ನ್ಯಾಯಾಲಯ ನೀಡಿರುವ ಜಾಮೀನಿನಲ್ಲಿನ ಷರತ್ತಿನ ಅನ್ವಯ ಶರಣ್ ಪಂಪ್ವೆಲ್ ಅನುಮತಿ ಇಲ್ಲದೆ ದ.ಕ. ಜಿಲ್ಲೆ ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಅದನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಗೆ ಆಗಮಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News