ಸಿದ್ಧರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸುನೀಲ್ ಕುಮಾರ್

Update: 2024-08-17 09:10 GMT

ಉಡುಪಿ, ಆ.17: ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅವಕಾಶ ಕೊಟ್ಟಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅವರು ಅಧಿಕಾರದಲ್ಲಿ ಇರಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಡ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರಿಗೆ ಮೂರು ಮಂದಿ ಸಾಮಾಜಿಕ ಕಾರ್ಯಕರ್ತರು ದೂರು ಕೊಟ್ಟಿದ್ದಾರೆಯೇ ಹೊರತು ಬಿಜೆಪಿ ನೀಡಿಲ್ಲ. ರಾಜ್ಯಪಾಲರು ವಿವರಣೆ ಕೇಳಿದ್ದರೂ ಯಾವುದೇ ವಿವರಣೆಯನ್ನು ಆ ಸಂದರ್ಭ ಮುಖ್ಯಮಂತ್ರಿಗಳು ನೀಡಿಲ್ಲ. ಕರ್ನಾಟಕದ ರಾಜಕೀಯಕ್ಕೆ ಇತಿಹಾಸ ಮತ್ತು ಪರಂಪರೆ ಇದೆ. ಆದುದರಿಂದ ಮುಖ್ಯಮಂತ್ರಿಗಳು ಒಂದು ಕ್ಷಣ ಕೂಡ ಆ ಸ್ಥಾನದಲ್ಲಿ ಇರಬಾರದು ಎಂದರು.

ತನಿಖೆಯನ್ನು ಮಾಡುತ್ತೇವೆ ಎಂಬ ನೆಪಗಳನ್ನು ಸರಕಾರ ಒಡ್ಡಬಾರದು. ತನಿಖೆಯಾಗಿ ಆರೋಪ ಮುಕ್ತರಾಗುವವರೆಗೆ ಮುಖ್ಯಮಂತ್ರಿ ಕುರ್ಚಿಯನ್ನು ಸಿದ್ಧರಾಮಯ್ಯ ತ್ಯಾಗ ಮಾಡಲಿ. ಆರೋಪ ಸಾಬೀತಾಗದೆ ನಿರಪರಾಧಿಯಾದರೆ ಹೈಕಮಾಂಡ್ ಅನುಮತಿ ತೆಗೆದುಕೊಂಡು ಮುಂದೆ ಅವರೇ ಮುಖ್ಯಮಂತ್ರಿಯಾಗಲಿ. ತನಿಖೆ ಸಂದರ್ಭದಲ್ಲಿ ಆ ಸ್ಥಾನದಲ್ಲಿ ಸಿದ್ಧರಾಮಯ್ಯ ಇರುವುದು ಸರಿಯಲ್ಲ ಎಂದರು.

ರಾಜ್ಯಪಾಲರು ಕಾನೂನು ತಜ್ಞರ ಅಭಿಪ್ರಾಯ ಕೇಳಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಸಿದ್ಧರಾಮಯ್ಯ ಇಂದು ಅಥವಾ ನಾಳೆ ರಾಜೀನಾಮೆ ಕೊಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಶಾಸಕರು ಬೆಂಗಳೂರಿನಲ್ಲಿ, ಪಕ್ಷ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಆಡಳಿತ ಪಕ್ಷದಲ್ಲಿರುವವರು ಜನ ಆಂದೋಲನ ಚಳುವಳಿ ಮಾಡುವುದು ಶೋಭೆ ತರಲ್ಲ ಎಂದು ಅವರು ಹೇಳಿದರು.

ಲಾಲು ಪ್ರಸಾದ್ ಯಾದವ್, ಜಯಲಲಿತಾ, ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದ್ದರು. ತನಿಖೆ ಎದುರಿಸುವಾಗ ಆ ಸ್ಥಾನದಲ್ಲಿ ಇರಬಾರದು. ಈ ವಿಚಾರದಲ್ಲಿ ರಾಜ್ಯಪಾಲರನ್ನು ಟೀಕಿಸಬೇಡಿ ಎಂದು ಸಚಿವರಿಗೆ ಮನವಿ ಮಾಡುತ್ತೇನೆ. ಜನಾಂದೋಲನ ಆಗುವ ಮೊದಲು ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು. ಕರ್ನಾಟಕದ ಬಹಳ ದೊಡ್ಡ ಪ್ರಮಾಣದ ಪ್ರತಿಭಟನೆ ಎದುರಿಸುವಂತೆ ಮಾಡಬೇಡಿ ಎಂದು ಸುನೀಲ್ ಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News