ವಿದ್ಯುತ್ ಶುಲ್ಕದ ಹೊರೆ ಇಳಿಸಲು ಬೀದಿದೀಪಗಳಿಗೆ ಸೋಲಾರ್ ಅಳವಡಿಕೆ: ಡಿಸಿ ವಿದ್ಯಾ ಕುಮಾರಿ

Update: 2023-10-22 14:43 GMT

ಕುಂದಾಪುರ, ಅ.22: ಸರಕಾರವು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸುತ್ತಿದ್ದು ಇದರ ಬೆಳವಣಿಗೆಗೆ ಉತ್ತಮ ಸಹಕಾರ ನೀಡುತ್ತಿದೆ. ವಿದ್ಯುತ್ ಶುಲ್ಕದ ಹೊರೆ ಕಡಿಮೆ ಮಾಡಲು ಸ್ಥಳೀಯಾಡಳಿತದ ವಿಶೇಷ ಅನುದಾನದ ಮೂಲಕ ಬೀದಿ ದೀಪಗಳಿಗೆ ಸೋಲಾರ್ ಅಳವಡಿಸುವ ಕೆಲಸವಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸೆಲ್ಕೋ ಸೋಲಾರ್ ಲೈಟ್ ಫೌಂಡೇಶನ್, ಕೊರ್ಗಿ ಕೆ.ಸಿ.ಹೆಗ್ಡೆ ಫ್ಯಾಮಿಲಿ ಹಾಗೂ ಇತರ ದಾನಿಗಳ ಸಹಭಾಗಿತ್ವದಲ್ಲಿ ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ವಿದ್ಯುತ್ ಸಂಪರ್ಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ರವಿವಾರ ಮಾತನಾಡುತಿದ್ದರು.

ಸರಕಾರದ ಜೊತೆ ದಾನಿಗಳಿಂದಲೂ ಅಗತ್ಯ ಸವಲತ್ತುಗಳನ್ನು ಪಡೆದು ಕೊಂಡಾಗ, ವ್ಯವಸ್ಥೆಗಳು ಸುಧಾರಣೆಗೊಂಡು ಜನರಿಗೆ ಸೌಲಭ್ಯ ಸಿಗಲು ಸಹಾಯವಾಗುತ್ತದೆ. ಕಡಿಮೆ ಮಳೆಯಾಗಿರುವುದರಿಂದ ವಿದ್ಯುತ್ ಬೇಡಿಕೆ ಯನ್ನು ನೀಗಿಸಲು ಸೋಲಾರ್ ವ್ಯವಸ್ಥೆಗೆ ನಾವು ಮುಂದಾಗಬೇಕಾದ ಈ ಕಾಲಘಟ್ಟದಲ್ಲಿ ಆರೋಗ್ಯ ಕೇಂದ್ರಕ್ಕೆ ಸೋಲಾರ್ ವ್ಯವಸ್ಥೆ ಒದಗಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.

ಸೋಲಾರ್ ವಿದ್ಯುತ್ ಸಂಪರ್ಕ ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಮುತವರ್ಜಿ ವಹಿಸಿ ಕೆಲಸ ಮಾಡು ವುದರಿಂದ ಊರಿನ ಅಭಿವೃದ್ಧಿಯೊಂದಿಗೆ ದೇಶ ಬೆಳೆಯುತ್ತದೆ. ಗ್ರಾಮಗಳ ಅಭಿವೃದ್ಧಿಯ ಚಿಂತನೆಗಳು ಪ್ರಾಮಾಣಿಕವಾಗಿದ್ದಾಗ, ಸರಾಕಾರದ ಸವಲತ್ತುಗಳು ತಲುಪಬೇಕಾದ ಫಲಾನುಭವಿಗಳಿಗೆ ತಲುಪುತ್ತದೆ ಎಂದರು.

ಕೊರ್ಗಿ ಗ್ರಾಪಂನ್ನು ಸಂಪೂರ್ಣವಾಗಿ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಗ್ರಾಮ ಪಂಚಾಯತ್ ನಿರ್ಧರಿಸಿದ್ದು, ಸ್ಥಳೀಯರು ಇದಕ್ಕೆ ಸಹಕಾರ ನೀಡಬೇಕು. ಕೊರ್ಗಿಯಲ್ಲಿ ಸ್ಥಳೀಯರ ಮೂಲಭೂತ ಸೌಕರ್ಯಗಳಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳಿದೆ. ಮುಂದಿನ ದಿನದಲ್ಲಿ ಜಿಲ್ಲಾಡಳಿತದಿಂದ ಪ್ರಾಥಮಿಕ ಕೇಂದ್ರದ ಮುಂಭಾಗದ ಆವರಣಕ್ಕೆ ಇಂಟರ್ ಲಾಕ್ ಹಾಗೂ ಸಿಬ್ಬಂದಿಗಳ ವಸತಿ ಕೇಂದ್ರವನ್ನು ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರೇಮಾನಂದ, ಕಾಳಾವರ ಗ್ರಾಪಂ ಮಾಜಿ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ಕೊರ್ಗಿ ಗ್ರಾಪಂ ಅಧ್ಯಕ್ಷೆ ಉಮಾ ವತಿ ಶೆಟ್ಟಿ, ಮಾಜಿ ಅಧ್ಯಕ್ಷ ಗೌರೀಶ್ ಹೆಗ್ಡೆ, ಸೆಲ್ಕೋ ಫೌಂಡಶೇನ್ ಎಜಿಎಂ ಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಸೋಲಾರ್ ವಿದ್ಯುತ್ ಅಳವಡಿಕೆಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸ ಲಾಯಿತು. ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪ್ರತಾಪ್ ಕುಮಾರ್ ಕೆ. ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News