ನ.1ರಿಂದ 14 ವರ್ಷದೊಳಗಿನ ಶಾಲಾಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟ; 1800ಕ್ಕೂ ಅಧಿಕ ವಿದ್ಯಾರ್ಥಿ ಕ್ರೀಡಾಪಟುಗಳ ಸ್ಪರ್ಧೆ

Update: 2023-10-30 15:15 GMT
ನ.1ರಿಂದ 14 ವರ್ಷದೊಳಗಿನ ಶಾಲಾಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟ; 1800ಕ್ಕೂ ಅಧಿಕ ವಿದ್ಯಾರ್ಥಿ ಕ್ರೀಡಾಪಟುಗಳ ಸ್ಪರ್ಧೆ
  • whatsapp icon

ಉಡುಪಿ, ಅ.30: 14 ವರ್ಷದೊಳಗಿನ (8ನೇ ತರಗತಿ) ಶಾಲಾ ಬಾಲಕ- ಬಾಲಕಿಯರ ಮೂರು ದಿನಗಳ ರಾಜ್ಯಮಟ್ಟದ ಕ್ರೀಡಾಕೂಟ 2023-24 ನವೆಂಬರ್ 1ರಿಂದ 3ರವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ನಡೆಯಲಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಉಡುಪಿಯ ಸೈಂಟ್ ಸಿಸಿಲೀಸ್ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾ ಕೂಟ ನಡೆಯಲಿದೆ ಎಂದು ಅವರು ವಿವರಿಸಿದರು.

ಕ್ರೀಡಾಕೂಟವನ್ನು ನ.1ರ ಸಂಜೆ 4:30ಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳಕರ್ ಉದ್ಘಾಟಿಸಲಿ ದ್ದಾರೆ ಎಂದರು.

ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ, ರಾಜ್ಯ ಯುವ ಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಇವರ ಉಪಸ್ಥಿತಿಯಲ್ಲಿ ವಂದನೆಯನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಯಶಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಸಹ ನಿರ್ದೇಶಕ ಎಸ್.ಎನ್. ರಮೇಶ್ ಅವರೂ ಉಪಸ್ಥಿತರಿರಲಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳು ಹಾಗೂ 2 ಕ್ರೀಡಾವಸತಿ ಶಾಲೆ ಗಳಿಂದ ಸುಮಾರು 1,800 ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 250 ಮಂದಿ ತಂಡಗಳ ವ್ಯವಸ್ಥಾ ಪಕರು, 250 ಮಂದಿ ಕ್ರೀಡಾಧಿಕಾರಿಗಳು, ಸ್ವಯಂ ಸೇವಕರು, ಕ್ರೀಡಾಆಯೋಜಕರು ಸೇರಿದಂತೆ ಸುಮಾರು 2,500 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಯಶಪಾಲ್ ಸುವರ್ಣ ವಿವರಿಸಿದರು.

ಕ್ರೀಡಾಕೂಟದ ಉದ್ಘಾಟನೆಗೆ ಮುನ್ನ ಅಪರಾಹ್ನ 3:00ಗಂಟೆಗೆ ಉಡುಪಿಯ ಶೋಕಮಾತಾ ಇಗರ್ಜಿ ಆವರಣದಿಂದ ಕ್ರೀಡಾಪಟು ವಿದ್ಯಾರ್ಥಿಗಳ ಮೆರವಣಿಗೆ ನಡೆಯಲಿದೆ. ಇದು ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡಿನ ಕ್ರೀಡಾಂಗಣಕ್ಕೆ ಬರಲಿದೆ.

ಕ್ರೀಡಾಪಟುಗಳಿಗೆ ನಗರದ 17 ಕಡೆಗಳಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲರಿಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು, ಬಾಲಕಿಯರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು. ಹೊರ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳನ್ನು ಸ್ವಾಗತಿಸಲು ಬನ್ನಂಜೆಯ ಬಸ್ ನಿಲ್ದಾಣ ಹಾಗೂ ಂದ್ರಾಳಿ ರೈಲು ನಿಲ್ದಾಣದಲ್ಲಿ ಸ್ವಾಗತ ಕೌಂಟರ್‌ಗಳನ್ನು ತೆರೆಯಲಾಗುವುದು. ಅವರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ನ.1ರಂದು ಸಂಜೆ ಕ್ರೀಡಾಕೂಟದ ಉದ್ಘಾಟನೆಯ ಬಳಿಕ ಭಾರ್ಗವಿ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ವಿವಿಧ ಶಾಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದೂ ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಸೈಂಟ್ ಸಿಸಿಲೀಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜೆ.ಕ್ರಾಸ್ತಾ, ಸೈಂಟ್ ಸಿಸಿಲೀಸ್ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಿಸ್ಟರ್ ತೆರೇಸಾ ಜ್ಯೋತಿ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸೊಹೇಲ್ ಅಮೀನ್, ಪ್ರಶಾಂತ್ ಜತ್ತನ್ನ, ಪ್ರಹ್ಲಾದ್ ಬಲ್ಲಾಳ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News