ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಇಂದಿನ ಆದ್ಯತೆ: ಪರಿಷತ್ ಉಪಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಸಚಿವೆ ಹೆಬ್ಬಾಳ್ಕರ್

Update: 2024-10-19 13:39 GMT

ಉಡುಪಿ: ತಳಮಟ್ಟದ ಗ್ರಾಮೀಣಾಭಿವೃದ್ಧಿ ಗುರಿಸಾಧನೆಗಾಗಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಬೇಕಾಗಿರುವುದು ಇಂದಿನ ಆದ್ಯತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಅನಿವಾರ್ಯ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಚುನಾವಣೆಯ ಉಸ್ತುವಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಈ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜು ಪೂಜಾರಿ ಅನುಭವಿಯಾಗಿದ್ದು, ಪಕ್ಷದ ಶಿಸ್ತಿನ ಸಿಪಾಯಿಯಾಗಿಯೂ ಗುರುತಿ ಸಿಕೊಂಡಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

ಸೋಮವಾರ ನಡೆಯುವ ಚುನಾವಣೆಯಲ್ಲಿ ಬಜೆಪಿಯನ್ನು ಸೋಲಿಸಲು ನಮಗೆ ಉತ್ತಮ ಅವಕಾಶಗಳಿವೆ. ರಾಜಕೀಯವಾಗಿಯೂ ಈ ಚುನಾವಣೆ ನಮಗೆ ಮುಖ್ಯವಾಗಿದೆ.ಕಾರ್ಯಕರ್ತರೇ ನಮಗೆ ಸ್ಪೂರ್ತಿ. ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡಿದರೆ ರಾಜು ಪೂಜಾರಿ ಅವರ ಗೆಲವು ಶತ:ಸಿದ್ಧ ಎಂದರು.

ವಿಧಾನಪರಿಷತ್ ಸದಸ್ಯ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿಗಳಾದ ಐವನ್ ಡಿ’ಸೋಜ ಮಾತನಾಡಿ, ಕಾಂಗ್ರೆಸ್ ಸಾಮಾಜಿಕ ಕಾಳಜಿ ಮತ್ತು ಕಾರ್ಯಸಾಧನೆಯ ಬದ್ಧತೆಯ ಮೇಲೆ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯ ಕರ್ತ, ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಅನುಭವ ಹೊಂದಿರುವ ರಾಜು ಪೂಜಾರಿ ಅವರನ್ನು ಚುನಾವಣಾ ಕಣಕ್ಕಿಳಿ ಸಿದೆ. ಗ್ರಾಮಪಂಚಾಯತ್ ಸದಸ್ಯನಾಗಿ, ಅಧ್ಯಕ್ಷನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಅಧ್ಯಕ್ಷನಾಗಿ ಅವಿಭಜಿತ ದ.ಕ ಜಿಲ್ಲೆಯ ಜನರಿಗೆ ಅವರು ನ್ಯಾಯ ಒದಗಿಸಿಕೊಟ್ಟವರು ಎಂದು ವಿವರಿಸಿದರು.

ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತಾಡಿ, ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಅನುಭವಿಸಿದ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಈ ಭಾರಿ ನಮ್ಮ ಅಭ್ಯರ್ಥಿ ರಾಜು ಪೂಜಾರಿ ಅವರನ್ನು ಗೆಲ್ಲಿಸುವ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ ಈ ಚುನಾವಣೆಗಾಗಿ ಜಿಲ್ಲಾ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಿದೆ. ಪಕ್ಷಕ್ಕೆ ಎಲ್ಲಾ ಕ್ಷೇತ್ರಗಳಿಂದಲೂ ಅನುಕೂಲಕರ ವಾತಾವರಣವಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಮಾತಾಡಿ ತನ್ನ ಸಾಧನೆಗಳನ್ನು ಕಾರ್ಯಕರ್ತರ ಮುಂದಿಟ್ಟು ಮತಯಾಚಿಸಿ ತನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಹೇಳಿದರು. ವಿಜಯ ನಾಯರಿ ಅ.21ರ ಚುನಾವಣೆ ಸಮಗ್ರ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಪೂರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಮುನಿಯಾಲು ಉದಯಕುಮಾರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಪ್ರಸಾದ್ ರಾಜ್ ಕಾಂಚನ್, ಎಂ.ಎಸ್.ಮಹಮ್ಮದ್, ಬ್ಲಾಕ್ ಅಧ್ಯಕ್ಷ ರಾದ ರಮೇಶ್ ಕಾಂಚನ್, ನವೀನ್‌ಚಂದ್ರ ಸುವರ್ಣ, ಪ್ರದೀಪ್ ಕುಮಾರ್ ಶೆಟ್ಟಿ, ಶಂಕರ್ ಕುಂದರ್, ಸಂತೋಷ್ ಕುಲಾಲ್, ದಿನಕರ ಹೇರೂರು, ಸದಾಶಿವ ದೇವಾಡಿಗ ಉಪಸ್ಥಿತರಿದ್ದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.


 



Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News