ವಿಶ್ವಕರ್ಮ ಯೋಜನೆಯಡಿ ಟೈಲರ್ಸ್‌ಗಳಿಗೆ ಇನ್ನೂ ಸಿಗದ ಉಚಿತ ಟೂಲ್‌ಕಿಟ್, ತರಬೇತಿ ಭತ್ಯೆ: ಟೈಲರ್ಸ್ ಅಸೋಸಿಯೇಶನ್‌ನಿಂದ ಉಡುಪಿ ಡಿಸಿಗೆ ಮನವಿ

ಉಡುಪಿ: ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟೈಲರ್ಸ್‌ಗಳಿಗೆ ಆಗುತ್ತಿರುವ ತೊಂದರೆ ಹಾಗೂ ಉಚಿತ ಟುಲ್ ಕಿಟ್ ಮತ್ತು ತರಬೇತಿ ಭತ್ಯೆ ದೊರೆಯದ ಕುರಿತು ಕರ್ನಾಟಕ ಸೇಟ್ ಟೈಲರ್ಸ್ ಅಸೋಸಿಯೇಶನ್ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಿಶ್ವಕರ್ಮ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 18 ಶ್ರಮಿಕ ವರ್ಗದವರಿಂದ ಲಕ್ಷಗಟ್ಟಲೆ ಅರ್ಜಿಗಳನ್ನು ಸ್ವೀಕರಿಸಿ, ಪ್ರಾರಂಭದ ದಿನಗಳಲ್ಲಿ ತರಬೇತಿ ಪಡೆದ ಸದಸ್ಯರಿಗೆ ತರಬೇತಿ ಭತ್ಯೆಯನ್ನು ಅವರವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಆದರೆ ಇತ್ತೀಚಿಗೆ ಸುಮಾರು ಮೂರು ತಿಂಗಳಿನಿಂದ ತರಬೇತಿ ಪಡೆದವರಿಗೆ ಯಾವುದೇ ಭತ್ಯೆ ಜಮೆಯಾಗುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಪ್ರತಿ ಫಲಾನುಭವಿಗೆ ಉಚಿತವಾಗಿ 15,000ರೂ. ಮೌಲ್ಯದ ಟೂಲ್ ಕಿಟ್ ನೀಡುವ ಭರವಸೆ ನೀಡಲಾಗಿದ್ದು, ಕೆಲವು ತರಬೇತಿ ಕೇಂದ್ರಗಳ ಸದಸ್ಯರಿಗೆ ಟೂಲ್ ಕಿಟ್ ಬಂದ ಬಗ್ಗೆ ಮಾಹಿತಿ ದೊರೆತಿದೆ. ಆದರೆ ಈವರೆಗೆ ಟೈಲರ್ಸ್ ಸಂಘದ ಯಾವುದೇ ಫಲಾನುಭವಿಗೂ ಟೂಲ್ ಕಿಟ್ ಬಂದಿಲ್ಲ. ಈ ಬಗ್ಗೆ ತಿಳಿಸಿದಾಗ ನಮ್ಮ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನಮ್ಮ ಸಂಘದ ಸದಸ್ಯರು ಈ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಈ ಸಮಸ್ಯೆಯಾಗುತ್ತಿರುವ ಬಗ್ಗೆ ಸಂಘದ ಪದಾಧಿಕಾರಿಗಳಾದ ನಾವು ಸದಸ್ಯರಿಗೆ ಯಾವ ರೀತಿಯಿಂದ ಸಮಜಾಯಿಷಿ ನೀಡಲಿ? ನಮ್ಮಂತಹ ಬಡ ಶ್ರಮಿಕ ವರ್ಗದವರಿಗೆ ಆಗುತ್ತಿರುವ ತೊಂದರೆಗಳಿಗೆ ಯಾರು ಹೊಣೆ? ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಆದುದರಿಂದ ಈ ಬಗ್ಗೆ ತಾವು ಸೂಕ್ತ ಗಮನಹರಿಸಿ, ಸಂಬಂಧಿತ ಪ್ರಾಧಿಕಾರಿಯವರಿಗೆ ವಾಸ್ತವಿಕತೆಯನ್ನು ಮನವರಿಕೆ ಮಾಡಿ, ಆದಷ್ಟು ಶೀಘ್ರ ನಮ್ಮ ಸಂಘದಿಂದ ಭಾಗವಹಿಸಿದ ಎಲ್ಲಾ ಫಲಾನುಭವಿಗಳಿಗೆ ಉಚಿತ ಟೂಲ್ ಕಿಟ್ ಹಾಗೂ ತರಬೇತಿ ಭತ್ಯೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಕೋಶಾಧಿಕಾರಿ ಕೆ.ರಾಮಚಂದ್ರ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಪಾಲನ್, ಪ್ರಧಾನ ಕಾರ್ಯದರ್ಶಿ ದಯಾನಂದ ಪ್ರಭು, ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್, ರಾಜ್ಯ ಸಮಿತಿ ಕಾರ್ಯದರ್ಶಿ ಶಾಂತಾ ಬಸ್ರೂರು, ಬ್ರಹ್ಮಾವರ ಕ್ಷೇತ್ರ ಅಧ್ಯಕ್ಷ ಬಿ.ನವೀನ್ ರಾವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ ಆಚಾರ್ಯ, ಪದಾಧಿಕಾರಿಗಳಾದ ಮಮತಾ ಶೆಟ್ಟಿ, ಅನಿತಾ ರಾವ್, ಶಂಕರ ಪೂಜಾರಿ, ಸುವಾಸಿನಿ ಜತ್ತನ್ನ, ಶ್ರೀಧರ ಆಚಾರ್ಯ, ಸುರೇಶ್ ಶೆಟ್ಟಿಗಾರ್, ಸ್ವಪ್ನಾ ಆನಂದ ಪೂಜಾರಿ, ವೀಣಾಶ್ರೀ ಮೊದಲಾದವರು ಉಪಸ್ಥಿತರಿದ್ದರು.