ನ.1ರೊಳಗೆ ಫಲಾನುಭವಿಗಳಿಗೆ ಮನೆ ಹಸ್ತಾಂತರಕ್ಕೆ ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್‌ಪಾಲ್ ಸೂಚನೆ

Update: 2023-10-06 15:24 GMT

ಉಡುಪಿ, ಅ.6: ರಾಜ್ಯ ವಸತಿ ಇಲಾಖೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೂಲಕ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹೆರ್ಗದ ಸರಳೆಬೆಟ್ಟು ಬಬ್ಬುಸ್ವಾಮಿ ಲೇಔಟ್‌ನ 9 ಎಕರೆ ಜಾಗದಲ್ಲಿ ಜಿ ಪ್ಲಸ್ ಮಾದರಿಯಲ್ಲಿ ನಿರ್ಮಿಸಿರುವ ಮನೆಗಳನ್ನು ನವೆಂಬರ್ 1ರೊಳಗೆ ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ಕಾನೂನು ಕ್ರಮದ ಜತೆಗೆ ಫಲಾನುಭವಿಗಳ ಪರವಾಗಿ ನಾನು ನಿಲ್ಲುತ್ತೇನೆ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿದ ಅವರು ನಗರ ಸಭಾ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ತಕ್ಷಣ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಗಳನ್ನು ನೀಡಿದರು.

ಹೆರ್ಗ ಸರಳೇಬೆಟ್ಟುವಿನಲ್ಲಿ ನಿರ್ಮಿಸಿರುವ ಮನೆಗಳ ಕಾಮಗಾರಿ ಶೇ. 80 ರಷ್ಟು ಪೂರ್ಣವಾಗಿದೆ. ತಾಂತ್ರಿಕ ಸಮಸ್ಯೆ ಯಿಂದಾಗಿ ಕಾಮಗಾರಿಗೆ ತಡೆ ನೀಡಿರುವುದರಿಂದ ಮನೆ ಹಸ್ತಾಂತರ ವಿಳಂಬವಾಗಿದೆ. ಸ್ವಂತ ಮನೆ ಹೊಂದುವ ಬಡ ಫಲಾನುಭವಿಗಳಿಗೆ ಮನೆಯ ಬಾಡಿಗೆ, ಲೋನ್ ಕಂತು ಪಾವತಿ ಸೇರಿದಂತೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ನ. 1ರೊಳಗೆ ಮನೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ದ್ದೇನೆ ಎಂದರು.

ಬ್ಯಾಂಕ್‌ನವರು ಗೃಹ ನಿರ್ಮಾಣಕ್ಕೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಾರೆ. ಗುತ್ತಿಗೆದಾರರು ಕಟ್ಟಡ ಕಾಮಗಾರಿ ಯನ್ನು ಪೂರ್ಣಗೊಳಿಸದೇ ಇರುವುದರಿಂದ ಹಣ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ಜನರ ನೋವು ಅರ್ಥವಾಗುತ್ತದೆ ಎಂದರು.

ವಾರಾಹಿ ನೀರು ವಿಳಂಬ: ಈ ಬಾರಿ ಮುಂಗಾರು ಮಳೆಯ ಅಭಾವ ದಿಂದ ಡಿಸೆಂಬರ್‌ನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಹೆಚ್ಚಿದೆ. ವಾರಾಹಿ ಯೋಜನೆಯ ಕಾಮಗಾರಿ ವಿಳಂಬವಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ಪ್ರತಿ ಸಭೆಯಲ್ಲೂ ಅವರು ಭರವಸೆಗಳನ್ನು ನೀಡುತಿದ್ದಾರೆ. ಇನ್ನು ಅಧಿಕಾರಿಗಳಿಂದ ಕಾಮಗಾರಿ ಪೂರ್ಣಗೊಳ್ಳುವ ಖಚಿತ ದಿನವನ್ನು ಲಿಖಿತವಾಗಿ ನೀಡುವಂತೆ ಸೂಚಿಸ ಲಾಗುವುದು. ಕಾಮಗಾರಿ ಮುಗಿಯದೇ ಹೋದರೆ ಕ್ರಮ ತೆಗೆದು ಕೊಳ್ಳಲಾಗುವುದು. ಬಜೆ ಡ್ಯಾಂನಲ್ಲೂ ನೀರಿನ ಮಟ್ಟ ಹೆಚ್ಚಿಸಲು ಹಾಗೂ ಹೂಳು ತೆಗೆಯುವ ಬಗ್ಗೆ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಉಡುಪಿ ನಗರದ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ನಗರೋತ್ಥಾನ ಯೋಜನೆ ಸಹಿತ ಅಭಿವೃದ್ಧಿ ಬಾಕಿಯಿರುವ ಕಾಮಗಾರಿಗಳು, ದಾರಿ ದೀಪ ಸಮರ್ಪಕ ನಿರ್ವಹಣೆ, ಮಳೆ ಅಭಾವದಿಂದ ಮುಂದಿನ ದಿನಗಳಲ್ಲಿ ಸೃಷ್ಟಿಯಾಗಲಿರುವ ಕುಡಿಯುವ ನೀರು ಸಮಸ್ಯೆಗಳ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ನಗರಸಭೆ ಪೌರಾಯುಕ್ತ ರಾಯಪ್ಪ, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News