ಮಕ್ಕಳ ಅಪೌಷ್ಠಿಕತೆ, ರಕ್ತಹೀನತೆಯನ್ನು ತ್ವರಿತವಾಗಿ ಗುರುತಿಸಲು ಪ್ರಯತ್ನ: ಡಾ.ಐ.ಪಿ.ಗಡಾದ್

Update: 2024-10-22 15:21 GMT

ಉಡುಪಿ: ಮಕ್ಕಳಲ್ಲಿರುವ ಅಪೌಷ್ಠಿಕತೆ ಮತ್ತು ರಕ್ತಹೀನತೆಯನ್ನು ಪ್ರಾರಂಭ ಹಂತದಲ್ಲೇ ಪತ್ತೆ ಹಚ್ಚಿ ಅವುಗಳನ್ನು ಸಮುದಾಯದಲ್ಲಿ ನಿಯಂತ್ರಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ಚೈನ್’ ಮಕ್ಕಳ ಸುಧಾರಿತ ಪೌಷ್ಠಿಕತೆಗಾಗಿ ಆರೋಗ್ಯ ಪ್ರಕ್ರಿಯೆ ಕುರಿತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಜಿಲ್ಲಾಮಟ್ಟದಲ್ಲಿ ಆಯೋಜಿಸಲಾದ ತರಬೇತಿ ಕಾರ್ಯಾಗಾರವನ್ನು ಇಂದು ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀಕೃಷ್ಣ ಸಭಾಂಗಣದಲ್ಲಿ ಉದ್ಘಾಟಿಸಿದ ಅವರು ಮಾತನಾಡುತಿದ್ದರು.

6 ವಷರ್ದೊಳಗಿನ ಮಕ್ಕಳಿಗೆ ಸಾಂಸ್ಥಿಕ ಹಾಗೂ ಸಮುದಾಯ ಮಟ್ಟದಲ್ಲಿ ಅಪೌಷ್ಠಿಕತೆ ನಿವಾರಣೆಗಾಗಿ ಆರೈಕೆ ಮತ್ತು ಚಿಕಿತ್ಸೆ, ಪೌಷ್ಠಿಕ ಪುನಶ್ಚೇತನ ಹಾಗೂ ಸಾರ್ವಜನಿಕ ಆರೋಗ್ಯ ಸೇವೆ ಮುಂತಾದ ಸೇವೆಗಳು ಸಮುದಾಯದ ಕಟ್ಟಕಡೆಯ ಜನರಿಗೂ ಲಭಿಸುವಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳಲ್ಲಿರುವ ಸಾಧಾರಣ (ಮಾಡರೇಟ್) ಹಾಗೂ ತೀವ್ರ (ಸೀವಿಯರ್) ಅಪೌಷ್ಠಿಕತೆಯನ್ನು ತ್ವರಿತವಾಗಿ ಗುರುತಿಸಿ ಅರ್ಹ ಮಕ್ಕಳನ್ನು ಪೌಷ್ಠಿಕ ಪುನಶ್ಚೇತನ ಕೇಂದ್ರಗಳಿಗೆ (ಎನ್‌ಆರ್‌ಸಿ) ನಿರ್ದೇಶಿಸಿ ಅಪೌಷ್ಠಿಕತೆಯನ್ನು ನಿವಾರಿಸಬೇಕು ಎಂದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ಜ್ಯೋತ್ಸ್ನಾ ಬಿ.ಎಸ್ ಮಾತನಾಡಿ, ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗಾಗಿ ಸಮತೋಲಿತ ಆಹಾರದ ಅಗತ್ಯವಿದೆ. ಪೌಷ್ಠಿಕತೆಯ ಏಳು ಅಂಶಗಳು ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ವಿಟಮಿನ್ಸ್, ಖನಿಜಗಳು, ಆಹಾರದ ಫೈಬರ್, ನೀರು ಇವುಗಳು ಸಮತೋಲಿತವಾಗಿ ದೇಹಕ್ಕೆ ಸೇರಿದರೆ ಉತ್ತಮ ಆರೋಗ್ಯವನ್ನು ಪಡೆಯ ಬಹುದು. ಈ ಅಂಶವನ್ನು ಸಮುದಾಯದ ಜನರಿಗೆ ಮನವರಿಕೆ ಮಾಡಬೇಕು ಎಂದರು.

ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೋಟ ಸಿಹೆಚ್‌ಸಿ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ಮಾಧವ ಪೈ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಳಾದ ವಿಜಯಬಾಯಿ, ಚಂದ್ರಕಲಾ ಹಾಗೂ ಭಾಗ್ಯಲಕ್ಷ್ಮಿ, ಕುಂದಾಪುರ ಎನ್‌ಆರ್‌ಸಿ ಡಯಟ್ ಕೌನ್ಸಿಲರ್ ಗುರುದೇವ ವಿ.ಕುಮಾರ್ ತರಬೇತಿ ನೀಡಿದರು.

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರೀತಮ್ ಬಿ.ಎಸ್, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಗಿರೀಶ್ ಜೆ. ಕಡ್ಡಿಪುಡಿ, ಆರ್‌ಸಿಹೆಚ್ ಡಿ.ಪಿ.ಸಿ ಸುಧೀಂದ್ರ, ಪ್ರತಿಮಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News