ರಾಣಿ ಚೆನ್ನಮ್ಮ ವ್ಯಕ್ತಿತ್ವ ಮಹಿಳೆಯರಿಗೆ ಮಾದರಿ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-10-23 14:16 GMT

ಉಡುಪಿ: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮರ ಹೋರಾಟ ಮನೋಭಾವ, ಆತ್ಮವಿಶ್ವಾಸ, ಶೌರ್ಯ, ಪರಾಕ್ರಮಗಳು ಪ್ರತಿಯೊಬ್ಬ ಮಹಿಳೆಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ಜಯ ಸಾಧಿಸಿ, 200 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ‘ಕಿತ್ತೂರು ಉತ್ಸವ-2024’ರ ಪ್ರಯುಕ್ತ ವಿಜಯ ಜ್ಯೋತಿ ರಥಯಾತ್ರೆಯನ್ನು ಆಯೋಜಿಸಿದ್ದು, ರಥವು ರಾಜ್ಯದಾದ್ಯಂತ ಸಂಚರಿಸುವ ಮೂಲಕ ರಾಣಿ ಚೆನ್ನಮ್ಮರ ವ್ಯಕ್ತಿತ್ವ ಹಾಗೂ ಸಾಹಸಗಾಥೆಯನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಡಿದೆ ಎಂದವರು ಹೇಳಿದರು.

ಮಹಿಳೆ ಮನಸ್ಸು ಮಾಡಿದರೇ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ಕಿತ್ತೂರು ರಾಣಿ ಚೆನ್ನ ಮ್ಮನೇ ಸೂಕ್ತ ನಿದರ್ಶನ. ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಜೀವನ ನಡೆಸಿದ ಚೆನ್ನಮ್ಮರ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅದನ್ನು ಪಾಲಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್ ಮಾತನಾಡಿ, ರಾಣಿ ಚೆನ್ನಮ್ಮರ ದಿಟ್ಟತನ ಹಾಗೂ ಸ್ವಾಭಿಮಾನದ ಪ್ರತೀಕ ವಾದ ಜೀವನಶೈಲಿಯನ್ನು ಮಹಿಳೆಯರು ಸ್ಪೂರ್ತಿಯಾಗಿರಿಸಿಕೊಂಡು, ಆಧುನಿಕ ಸಮಾಜದಲ್ಲಿ ಪ್ರತಿನಿತ್ಯ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಿತ್ತೂರು ರಾಣಿ ಚೆನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿ, ಬಾಲ್ಯದಿಂದಲೇ ಧೀರ ಮಹಿಳೆಯಾಗಿ ರೂಪುಗೊಂಡಿದ್ದ ಇವರು ಪುರುಷರಿಗೆ ಸರಿಸಮಾನ ವಾಗಿ ಕತ್ತಿವರಸೆ, ಕುದುರೆ ಸವಾರಿ ಮುಂತಾದ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಚೆನ್ನಮ್ಮ ತನ್ನ ಸಂಸ್ಥಾನ ಹಾಗೂ ಸ್ವಾತಂತ್ರ್ಯ ಉಳಿಸಿ ಕೊಳ್ಳಲು ನಡೆಸಿದ ಹೋರಾಟ, ತ್ಯಾಗ ಇಂದಿಗೂ ಜನಮಾನಸದಲ್ಲಿ ಅಚ್ಛಳಿಯದೇ ಉಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ, ಕಸಾಪದ ಮನೋಹರ್ ಹಾಗೂ ನರಸಿಂಹ ಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಪ್ರಭಾಕರ ಪೂಜಾರಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News