ಡಿಜಿಟಲ್ ಮೀಡಿಯಾಗೆ ಉಜ್ವಲ ಭವಿಷ್ಯ: ಮನೀಶ್ ದೇಸಾಯಿ

Update: 2024-10-22 18:08 GMT

ಉಡುಪಿ: ಭಾರತದಲ್ಲಿ ಡಿಜಿಟಲ್ ಮೀಡಿಯಾಕ್ಕೆ ಉಜ್ವಲ ಭವಿಷ್ಯವಿದೆ. ಈಗಾಗಲೇ ಯುಟ್ಯೂಬ್‌ನ್ನು ಭಾರತದಲ್ಲಿ ಪ್ರತಿದಿನ ೪೬೦ ಮಿಲಿಯ ಭಾರತೀಯರು ಬಳಸುತಿದ್ದಾರೆ. ಇದು ಯೂಟ್ಯೂಬ್‌ನ ಬೆಳವಣಿಗೆಯ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಭಾರತದ ಪ್ರೆಸ್ ಇನ್‌ಫಾರ್ಮೇಶನ್ ಬ್ಯುರೋ (ಪಿಐಬಿ)ದ ನಿವೃತ್ತ ಮಹಾ ನಿರ್ದೇಶಕ ಮನೀಶ್ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.

ಮಾಹೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಮಯೂನಿಕೇಷನ್ (ಎಂಐಸಿ)ನ ೨೦೨೪ನೇ ಸಾಲಿನ ಮಾಧ್ಯಮ ಹಬ್ಬ ‘ಆರ್ಟಿಕಲ್-೧೯’ನ್ನು ಸೋಮವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಶಿಖರೋಪನ್ಯಾಸ ದಲ್ಲಿ ಮಾತನಾಡುತಿದ್ದರು.

ಯೂಟ್ಯೂಬ್‌ನೊಂದಿಗೆ ಓಟಿಟಿ ಪ್ಲಾಟ್‌ಪೋರಂ ತ್ವರಿತಗತಿಯಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಇದರೊಂದಿಗೆ ಯುವ ಜನತೆ ತಮ್ಮ ಅಭಿಪ್ರಾಯಗಳನ್ನು ವಿವಿಧ ಕಡೆಗಳಲ್ಲಿ ಪ್ರಕಟಿಸುತಿದ್ದು, ಇದು ಸಾಂಪ್ರದಾಯಿಕ ಮಾಧ್ಯಮಗಳಿಗೂ ಸವಾಲನ್ನು ಒಡ್ಡುವ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇದು ಡಿಜಿಟಲ್ ಮಾದ್ಯಮಗಳನ್ನು ಬಳಸುವ ಜನರಿಗೂ ಆಸಕ್ತಿದಾಯಕ ವಿಷಯಗಳನ್ನು ತಿಳಿಸುತ್ತಿದೆ ಎಂದರು.

ಭಾರತದಲ್ಲಿ ಮಾಧ್ಯಮಗಳು ಅದರಲ್ಲೂ ಪತ್ರಿಕೆಗಳು ಬೆಳೆದುಬಂದ ರೀತಿಯನ್ನು ವಿವರಿಸಿದ ದೇಸಾಯಿ, ವಿಶ್ವಮಟ್ಟದ ದೇಶದ ಪತ್ರಿಕೆಗಳ ಸ್ಥಾನಮಾನ, ಸಾಧನೆಗಳನ್ನು ಸಹ ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿವರಿಸಿದರು.

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಆಗುತ್ತಿರುವ ಮಿಂಚಿನ ಬೆಳವಣಿಗೆಯ ಕುರಿತು ಸವಿಸ್ತಾರವಾಗಿ ವಿವರಿಸಿದ ಮನೀಶ್ ದೇಸಾಯಿ, ಪತ್ರಿಕಾ ವಲಯದಲ್ಲಿ ಎಐ ಎಂಬುದು ಇಂದು ವಿವಿಧ ಕಲ್ಪನೆಗಳನ್ನು ಹುಟ್ಟುಹಾಕುತ್ತಿದೆ. ಪತ್ರಿಕೋದ್ಯಮದಲ್ಲಿ ಎಐ ಬಳಕೆ ಕುರಿತಂತೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಅದು ಪೂರಕವಾಗಿ ಕೆಲಸ ಮಾಡಬಹುದು ಎಂದು ಹೇಳುತಿದ್ದರೆ, ಇನ್ನು ಕೆಲವರು ಇಂದು ಪತ್ರಿಕೋದ್ಯಮದ ಕೊನೆಯ ದಿನಗಳಿಗೆ ಕಾರಣವಾಗಬಲ್ಲದು ಎಂದು ಅಭಿಪ್ರಾಯ ಪಡುತಿದ್ದಾರೆ ಎಂದರು.

ಎಂಐಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕಿ ಕಾರ್ಯಕ್ರಮ ಸಂಯೋಜಕಿ ಶೃತಿ ಶೆಟ್ಟಿ ಉಪಸ್ಥಿತರಿದ್ದರು.

ಬಳಿಕ ಡಿಜಿಟಲ್ ಕಂಟೆಂಟ್ ವಿನ್ಯಾಸಕಾರ ತಾಜ್‌ಮೋಲಾ ಹಾಗೂ ನಟ, ಉದ್ಯಮಿ ನೈನಾ ಸರೀನ್‌ರಿಂ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳು ನಡೆದವು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News