ಉಡುಪಿಯ ಕಂಚಿನಡ್ಕದ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆ ತಡೆ

Update: 2024-08-23 15:00 GMT

ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು : ಉಡುಪಿ ಜಿಲ್ಲೆಯ ಕಂಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆಂದು ಖಾಸಗಿ ಸಂಸ್ಥೆಗೆ ನೀಡಿರುವ ಕಾರ್ಯಾದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಪ್ರತಿನಿಧಿಗಳೊಂದಿಗೆ ಪಡುಬಿದ್ರಿ- ಬೆಳ್ಳಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವಂತಹ ಟೋಲ್‌ಗೇಟ್ ಸುಂಕ ವಸೂಲಾತಿ ಕೇಂದ್ರದಿಂದ ಉದ್ಭವಿಸಿರುವಂತಹ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಟೋಲ್ ಪ್ಲಾಝಾ ನಿರ್ಮಾಣ ಕಾರ್ಯವನ್ನು ಭಾರತೀ ಕನ್ಸ್ಟ್ರಕ್ಷನ್ ಸಂಸ್ಥೆಯ ವತಿಯಿಂದ ಪ್ರಾರಂಭಿಸಲು ಕೆ.ಆರ್.ಡಿ.ಸಿ.ಎಲ್. ಮೂಲಕ ಕಾರ್ಯಾದೇಶವನ್ನು ನೀಡಿದೆ ಎಂದು ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕಂಚಿನಡ್ಕ ಪ್ರದೇಶವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ದಟ್ಟಣೆ ಇರುವ ರಸ್ತೆಯನ್ನು ಹೊಂದಿದ್ದು, ಈವರೆಗೂ ಡಿವೈಡರ್‌ಗಳ ನಿರ್ಮಾಣವಾಗಲಿ, ಸರ್ವಿಸ್ ರಸ್ತೆ, ಶೌಚಾಲಯ ನಿರ್ಮಾಣ, ವಿಶ್ರಾಂತಿ ಗೃಹವಾಗಲಿ ನಿರ್ಮಾಣವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಪಡುಬಿದ್ರಿ ಜಂಕ್ಷನ್‌ನಿಂದ ರಾಜ್ಯ ಹೆದ್ದಾರಿ-66 ರಲ್ಲಿನ ಪಡುಬಿದ್ರಿ ಜಂಕ್ಷನ್‌ನಿಂದ ಮಂಗಳೂರು ಕಡೆಗೆ 5 ಕಿ.ಮೀ.ನಲ್ಲಿರುವ ಹೆಜಮಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಟೋಲ್ ನಿರ್ಮಿಸಿ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದೆ. ಉದ್ದೇಶಿತ ಕಂಚಿನಡ್ಕ ಪ್ರದೇಶವು ಕೇವಲ 7.50 ಕಿ.ಮೀ. ದೂರದಲ್ಲಿರುವುದರಿಂದ ಈ ಟೋಲ್ ಪ್ಲಾಜಾ ನಿರ್ಮಾಣ ಕಾರ್ಯವು ಆತುರದ ನಿರ್ಧಾರವಾಗಿದೆ ಎಂದಿದ್ದಾರೆ.

ಅಲ್ಲದೆ ಪ್ರತಿನಿತ್ಯ ಈ ರಸ್ತೆಯನ್ನೇ ಅವಲಿಂಬಿಸಿ ಓಡಾಡುವಂತಹ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ಕ್ಯಾಬ್ ಮತ್ತು ಆಟೋ ಚಾಲಕರುಗಳು ಎರಡು ಬಾರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ತೊಂದರೆಗೊಳಗಾಗುತ್ತಾರೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News