ಉಡುಪಿ: ಇನ್ನೂ ವಾಸಕ್ಕೆ ಸಿಗದ ಸರಕಾರಿ ವಸತಿ ಸಮುಚ್ಚಯ

Update: 2023-10-05 17:16 GMT

ನಝೀರ್ ಪೊಲ್ಯ

ಉಡುಪಿ, ಅ.5: ಸ್ವಂತ ಸೂರಿನಲ್ಲಿ ಬದುಕು ಕಾಣಬೇಕೆಂಬ ಕನಸು ಮೂರು ವರ್ಷಗಳಾದರೂ ಇನ್ನೂ ನನಸಾಗಿಲ್ಲ. ನಿರ್ಮಾಣಗೊಂಡು ಕಣ್ಣೆದುರೇ ಇರುವ ವಸತಿ ಸಮುಚ್ಚಯದಲ್ಲಿನ ಮನೆ ಇನ್ನೂ ಕೈಗೆಟಗಿಲ್ಲ. ಇತ್ತ ಬ್ಯಾಂಕ್ ಸಾಲ, ಅತ್ತ ಮನೆ ಬಾಡಿಗೆ ಪಾವತಿಸುತ್ತ ಬದುಕನ್ನು ಹೊರೆಯನ್ನಾಗಿಸಿರುವ ಸುಮಾರು 280 ಕುಟುಂಬಗಳ ಬದುಕು ಅತಂತ್ರವಾಗಿದೆ.

ಇದು ಕರ್ನಾಟಕ ಸರಕಾರ ವಸತಿ ಇಲಾಖೆಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸರ್ವರಿಗೂ ಸೂರು ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನಲ್ಲಿರುವ 9 ಎಕರೆ ಜಾಗದಲ್ಲಿ ಜಿ ಪ್ಲಸ್ ಮೂರು ಮಾದರಿಯಲ್ಲಿ ನಿರ್ಮಿಸಲಾದ 460 ಮನೆಗಳನ್ನೊಳಗೊಂಡ ವಸತಿ ಸಮುಚ್ಛಯದ ಫಲಾನುಭವಿಗಳ ಪರಿಸ್ಥಿತಿ...!

7.50ಲಕ್ಷ ರೂ. ಮೊತ್ತದ ಮನೆ

ಒಂದು ಮನೆಗೆ ಇತರೇ ಫಲಾನುಭವಿಗಳಿಂದ 90 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಂದ 60ಸಾವಿರ ರೂ. ಪಡೆಯ ಲಾಗಿತ್ತು. ಇದಕ್ಕೆ ಕೇಂದ್ರ ಸರಕಾರ 1.50ಲಕ್ಷ ರೂ. ಮತ್ತು ರಾಜ್ಯ ಸರಕಾರ ಎಸ್‌ಸಿಎಸ್‌ಟಿಗೆ 2ಲಕ್ಷ ರೂ. ಮತ್ತು ಇತರೆ ಫಲಾನುಭವಿಗಳಿಗೆ 1.20ಲಕ್ಷ ರೂ., ನಗರಸಭೆಯಿಂದ 74,299ರೂ. ಅನುದಾನ ನೀಡಿತ್ತು. ಉಳಿದ ಹಣವನ್ನು ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಾಲ ಒದಗಿಸಿ ಕೊಡಲಾಗಿತ್ತು. ಹೀಗೆ ಒಂದು ಮನೆಗೆ 7.50ಲಕ್ಷ ರೂ. ನಿಗದಿಪಡಿಸಲಾಗಿತ್ತು.

18 ತಿಂಗಳಲ್ಲಿ ಕಾಲಾವಧಿಯೊಂದಿಗೆ 2020ರ ಜನವರಿ ತಿಂಗಳಲ್ಲಿ 29.21 ಕೋಟಿ ರೂ. ವೆಚ್ಚದಲ್ಲಿ ಈ ವಸತಿ ಸಮುಚ್ಚಯದ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿತ್ತು. ನಿಧನಗತಿಯಲ್ಲಿ ಸಾಗಿದ ಕಾಮಗಾರಿಯು ಒಂದೂವರೆ ವರ್ಷ ಅಲ್ಲ, ಮೂರು ವರ್ಷಗಳ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಮಧ್ಯೆ 2023ರ ಮಾ.24ರಂದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿ ಯಲ್ಲಿ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿ, ಆಗಿನ ಶಾಸಕ ರಘುಪತಿ ಭಟ್ 280 ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡಿದ್ದರು ಎನ್ನುತ್ತಾರೆ ಫಲಾನುಭವಿ ಸಂದೇಶ್.

ಇನ್ನೂ ದೊರೆಯದ ವಿದ್ಯುತ್, ನೀರು

ಚುನಾವಣೆಯ ಬಳಿಕ ವಸತಿ ಸಮುಚ್ಚಯದ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ, ರಸ್ತೆ ನಿರ್ಮಾಣ ಕಾಮಗಾರಿಗಳು ಬಾಕಿ ಇವೆ. ಮನೆ ಸಂಪರ್ಕಿಸಲು ಸರಿಯಾದ ದಾರಿಯೇ ಇಲ್ಲವಾಗಿದೆ. ಬಾಲ್ಕನಿಯ ಕಬ್ಬಿಣಗಳು ತುಕ್ಕು ಹಿಡಿಯುತ್ತಿವೆ. ಕಳಪೆ ಮಟ್ಟದ ಕಿಟಕಿ ಬಾಗಿಲು ಕಿತ್ತು ಹೋಗುತ್ತಿವೆ.

ಈ ಎಲ್ಲ ಕುಟುಂಬಗಳು ಹಕ್ಕುಪತ್ರಗಳನ್ನು ಹಿಡಿದುಕೊಂಡು ತಮ್ಮ ತಮ್ಮ ಮನೆಗಾಗಿ ಹತೋರೆಯುತ್ತಿವೆ. ಬಾಡಿಗೆ ಮನೆಯಲ್ಲಿನಯೇ ವಾಸ ಮಾಡಿ ಕೊಂಡಿರುವ ಇವರೆಲ್ಲ, ಅತ್ತ ಬ್ಯಾಂಕ್ ಸಾಲ, ಇತ್ತ ಮನೆ ಬಾಡಿಗೆ ಪಾವತಿಸ ಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಮನೆಕೆಲಸ, ಕೂಲಿಕೆಲಸದಲ್ಲಿ ದಿನದೂಡುತ್ತಿರುವ ಈ ಕುಟುಂಬಗಳು ಈ ಹೊರೆಯಿಂದ ತತ್ತರಿಸಿ ಹೋಗಿವೆ.

‘ಈ ವಸತಿ ಸಮುಚ್ಚಯದಲ್ಲಿ ನಮ್ಮ ಮನೆ ಇದೆ. ಆರಂಭದಲ್ಲಿ ನನ್ನ ಚಿನ್ನದ ಕರಿಮಣಿ ಸರ ಅಡವಿಟ್ಟು 90ಸಾವಿರ ಪಾವತಿಸಿದ್ದೇವೆ. ಮನೆಯನ್ನು ಕೂಡಲೇ ಬಿಟ್ಟು ಕೊಡಬೇಕು. ಪ್ರತಿ ತಿಂಗಳು 2500ರೂ. ಸಾಲದ ಕಂತು ಬರುತ್ತಿದೆ. ಮನೆ ಬಾಡಿಗೆ 4500-5000ರೂ. ಪಾವತಿಸಬೇಕು. ಮಕ್ಕಳ ಶಾಲೆಯ ಶುಲ್ಕ ಸೇರಿದಂತೆ ತುಂಬಾ ಹಣ ಬೇಕಾಗುತ್ತಿದೆ’ ಎಂದು ಫಲಾನುಭವಿ ರತ್ನ ಅಳಲು ತೋಡಿಕೊಂಡರು.

‘ನಿಯಮ ಪ್ರಕಾರ 18 ತಿಂಗಳಲ್ಲಿ ಕಾಮಗಾರಿ ಮುಗಿಸಿಕೊಡಬೇಕಾಗಿತ್ತು. ಆದರೆ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಮನೆ ಬಿಟ್ಟು ಕೊಟ್ಟಿಲ್ಲ. ವಿದ್ಯುತ್ ಸಂಪರ್ಕಕ್ಕೆ 5ಸಾವಿರ ಮತ್ತು ನೀರಿನ ಸಂಪರ್ಕಕ್ಕೆ 2ಸಾವಿರ ರೂ. ಪಾವತಿಸಿ ದ್ದೇವೆ. ಆದರೆ ಈ ಎರಡೂ ಸಂಪರ್ಕ ಸಿಕ್ಕಿಲ್ಲ. ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಲು ಕರೆಯುತ್ತಾರೆ, ಹೋದರೆ ಅವರು ದುಬೈ ಹೋಗಿದ್ದಾರೆ ಹೇಳುತ್ತಾರೆ. ನಾವು ಯಾರ ಬಳಿ ಕೇಳಲಿ’ ಎಂದು ಫಲಾನುಭವಿ ಕರುಣಾಕರ್ ಪೂಜಾರಿ ನೋವು ತೋಡಿಕೊಂಡರು.

‘ನಮ್ಮ ಸಾವಿಗೆ ಶಾಸಕರೇ ಕಾರಣಕರ್ತರು’

‘ನಾವೆಲ್ಲ ಕಳೆದ 2ವರ್ಷಗಳಿಂದ ಬ್ಯಾಂಕ್ ಸಾಲವನ್ನು ಕಟ್ಟುತ್ತಿದ್ದೇವೆ. ಮಾಜಿ ಶಾಸಕ ರಘುಪತಿ ಭಟ್ ಚುನಾವಣೆ ಸಂದರ್ಭ ಸಭೆ ಕರೆದು ಹಕ್ಕುಪತ್ರ ನೀಡಿ, ಮೇ ತಿಂಗಳಲ್ಲಿ ಮನೆಯನ್ನು ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು. ಈಗಿನ ಶಾಸಕ ಯಶ್‌ಪಾಲ್ ಸುವರ್ಣ ಮೂರು ತಿಂಗಳಲ್ಲಿ ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದರು. ಈವರೆಗೆ ಯಾವುದೇ ಕೆಲಸ ಆಗಿಲ್ಲ’ ಎಂದು ಫಲಾನುಭವಿ ಸಂದೇಶ್ ದೂರಿದರು.

‘ಲೋನ್ ಕಟ್ಟಲು ಆಗದೆ, ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದೆ ಜೀವನ ತುಂಬಾ ಕಷ್ಟಕರ ಆಗಿದೆ. ಆದಷ್ಟು ಬೇಗ ದಿನಾಂಕವನ್ನು ನಿಗದಿ ಪಡಿಸಿ ನಮಗೆ ಮನೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ನಗರಸಭೆ ಅಧಿಕಾರಿಗಳೇ ಕಾರಣ ಆಗುತ್ತಾರೆ’ ಎಂದು ಅವರು ಹತಾಶರಾಗಿ ನುಡಿದರು.

‘ಮನೆಗಾಗಿ ಬೆಳ್ಳಿಯ ಕರಿಮಣಿ ಧರಿಸಿದ್ದೇನೆ’

‘ಮನೆ ಸಿಕ್ಕಿದರೆ ಬಾಡಿಗೆ ಕಟ್ಟುವ ಹಣವನ್ನು ಉಳಿಸಿಕೊಂಡು ಅಡವಿಟ್ಟ ಕರಿಮಣಿ ಸರವನ್ನು ಬಿಡಿಸಿಕೊಳ್ಳಬಹುದು ಎಂದು ಎನಿಸಿದ್ದೆ. ಆದರೆ ಈಗ ಎರಡು ವರ್ಷಗಳಿಂದ ಬಡ್ಡಿ ಕಟ್ಟಿಕೊಂಡೆ ಇದ್ದೇನೆ. ಅದಕ್ಕಾಗಿ ಈಗ ಬೆಳ್ಳಿ ಕರಿಮಣಿ ಹಾಕಿಕೊಂಡಿ ದ್ದೇನೆ’ ಎಂದು ವಸತಿ ಸಮುಚ್ಚಯದ ಫಲಾನುಭವಿ ರತ್ನ ನೋವಿನಿಂದ ಹೇಳಿದರು.

‘ನನ್ನ ಗಂಡ ಕೂಲಿ ಕೆಲಸ ಮಾಡುತ್ತಿದ್ದಾರೆ. ನಾನು ಮನೆ ಕೆಲಸ ಮಾಡುತ್ತೇನೆ. ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿ ದ್ದೇವೆ. ಬ್ಯಾಂಕ್ ಸಾಲ ಪಾವತಿಸಲು ಒಂದು ದಿನ ವಿಳಂಬವಾದರೂ ಬ್ಯಾಂಕಿನಿಂದ ಕರೆ ಮಾಡಿ ಹಿಂಸೆ ಕೊಡುತ್ತಾರೆ. ಅಲ್ಲದೆ ಹೆಚ್ಚುವರಿ ಬಡ್ಡಿ ಕೂಡ ವಿಧಿಸುತ್ತಾರೆ’ ಎಂದು ಅವರು ದೂರಿದರು.

‘ಇಂದು ಸ್ಥಳ ಪರಿಶೀಲನೆ ಮಾಡಿ ಬಂದಿದ್ದೇವೆ. ಇಲ್ಲಿನ ವಸತಿ ಸಮುಚ್ಚಯಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಆಗದೆ ಜನ ವಾಸ ಮಾಡಲು ಆಗುತ್ತಿಲ್ಲ. ಇದಕ್ಕೆ ನಗರಸಭೆಗೆ ಮಂಜೂರಾದ ನಗರೋತ್ಥಾನ ಯೋಜನೆಯಡಿ 60ಲಕ್ಷ ರೂ. ಮೀಸಲಿರಿಸಲಾಗಿದೆ. ಈ ಹಣ ಮುಂದಿನ ವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಿಡುಗಡೆಯಾದ ಕೂಡಲೇ ವಸತಿ ಸಮುಚ್ಚಯಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಒದಗಿಸಲಾಗುವುದು. ಮತ್ತೆ ಫಲಾನುಭವಿಗಳು ನಮ್ಮ ಮನೆಯಲ್ಲಿ ವಾಸ ಮಾಡಬಹುದಾಗಿದೆ’

-ರಾಯಪ್ಪ, ಪೌರಾಯುಕ್ತರು, ಉಡುಪಿ

‘ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗ ಗ್ರಾಮದ ಸರಕಾರಿ ವಸತಿ ಸಮುಚ್ಚಯಕ್ಕೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ, ದಾರಿದೀಪ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಉಡುಪಿ ನಗರ ಸಭೆ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಅ.6ರಂದು ಬೆಳಿಗ್ಗೆ 11 ಗಂಟೆಗೆ ಪೌರಾಯುಕ್ತರಿಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಸಲ್ಲಿಸುವ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ’

-ವೆಂಕಟೇಶ್ ಕೋಣಿ, ನಿವೇಶನ ರಹಿತರ ಹೋರಾಟ ಸಮಿತಿ






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News