ಉಡುಪಿ: ಹಾವಂಜೆ ಪರಿಸರದಲ್ಲಿ ಪತ್ತೆಯಾಗಿರುವುದು ಬೃಹತ್ ಶಿಲಾಯುಗದ ಗುಹಾ ಸಮಾಧಿ!
ಉಡುಪಿ, ಸೆ.24: ಹಾವುಂಜೆ ಗ್ರಾಮದ ಅಂಗಡಿಬೆಟ್ಟುವಿನ ಕಪ್ಪೆಟ್ಟು ಪ್ರಸಾದ್ ಶೆಟ್ಟಿ ಅವರ ಮನೆಯ ಕಂಪೌಂಡ್‌ಗೆ ತಾಗಿ ರಸ್ತೆಯ ಮಧ್ಯದಲ್ಲಿ ಕಂಡು ಬಂದ ಬೃಹತ್ ಹೊಂಡ ಹಳೆ ಶಿಲಾಯುಗದ ಗುಹಾ ಸಮಾಧಿಯಾಗಿದೆ ಎಂಬುದನ್ನು ಪುರಾತತ್ವ ಶಾಸ್ತ್ರಜ್ಞರು ಖಚಿತ ಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೆಬೆಟ್ಟು ನೀಡಿದ ದೂರವಾಣಿ ಮಾಹಿತಿಯಂತೆ ಇಂದು ಇತಿಹಾಸ ಸಂಶೋಧನಾ ವಿದ್ಯಾರ್ಥಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಪುರಾತತ್ವ ಶಾಸ್ತ್ರಜ್ಞ, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಸ್ಥಳ ಪರಿಶೀಲನೆ ಬಳಿಕ ಇದನ್ನು ಖಚಿತ ಪಡಿಸಿದ್ದಾರೆ ಎಂದು ಗಣೇಶ್‌ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಶ್ರೇಯಸ್, ಗೌತಮ್ ಹಾಗೂ ಕಾರ್ತಿಕ್ ಅವರೊಂದಿಗೆ ಹಾವಂಜೆ ಅಂಗಡಿ ಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಪ್ರೊ.ಮುರುಗೇಶಿ, ರಸ್ತೆಯ ಮಧ್ಯದಲ್ಲಿರುವ ಹೊಂಡವನ್ನು ಪರಿಶೀಲಿಸಿ ಇದೊಂದು ಹಳೆ ಶಿಲಾಯುಗದ ಗುಹಾ ಸಮಾಧಿಯಾಗಿದೆ ಎಂದು ಖಚಿತಪಡಿಸಿದ್ದಾರೆ.
ಈ ಸಮಾಧಿಯು ಕ್ರಿಸ್ತಪೂರ್ವದ ಕಾಲಘಟ್ಟದ್ದಾಗಿದ್ದು, ಈ ಗುಹಾ ಸಮಾಧಿ ಕೊಡಪಾನದ ಆಕೃತಿಯಲ್ಲಿದೆ ಎಂದು ತಿಳಿಸಿದರು. ಇದರ ತಲೆ ಭಾಗದ ಸುತ್ತಳತೆ 2.3 ಅಡಿ ಇದೆ. ಕೆಳಗಡೆ ಚಪ್ಪಟೆಯಾಗಿದ್ದು 8.5 ಅಡಿ ಉದ್ದವಿದೆ. ತಳಮಟ್ಟದಿಂದ ಮೇಲ್ಮುಖವಾಗಿ 9.6 ಅಡಿ ಎತ್ತರ ಇದೆ. ಒಟ್ಟಿನಲ್ಲಿ ಇದೊಂದು ಬೃಹತ್ ಶಿಲಾಯುಗದ ಗುಹಾ ಸಮಾಧಿಯಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ ಎಂದು ಗಣೇಶರಾಜ್ ಸರಳೆಬೆಟ್ಟು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಸಾದ್ ಶೆಟ್ಟಿ ಕಪ್ಪೆಟ್ಟು, ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೆಬೆಟ್ಟು, ರಾಜೇಶ್ ಪ್ರಭು ಪರ್ಕಳ, ಜಯ ಶೆಟ್ಟಿ ಬನ್ನಂಜೆ. ಹರೀಶ್ ಶೆಟ್ಟಿ ಕೀಳಂಜೆ. ಸುಂದರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.