ಉಡುಪಿ: ಸಿಡಬ್ಲ್ಯುಎಫ್‌ಐನ 70ನೇ ಅ.ಭಾ.ಕಾರ್ಯಕಾರಿ ಸಮಿತಿ ಸಭೆ

Update: 2024-08-23 13:50 GMT

ಉಡುಪಿ, ಆ.23: ದೇಶದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಾನೂನು ಹಾಗೂ ಸೆಸ್ ಕಾನೂನು ಜಾರಿಗೊಳಿಸುವಲ್ಲಿ ಅವಿರತವಾಗಿ ಹೋರಾಟ ನಡೆಸಿದ ಮತ್ತು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬರುವಲ್ಲಿ ನಿರಂತರ ವಾಗಿ ಹೋರಾಟ ನಡೆಸಿ ಯಶಸ್ವಿಯಾದ ಭಾರತ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ (ಸಿಡಬ್ಲ್ಯುಎಫ್‌ಐ)ದ 70ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯು ಇದೇ ಮೊದಲ ಬಾರಿ ಆ.28ರಿಂದ 30ರ ವರೆಗೆ ಉಡುಪಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆ ನಡೆದ ಬಳಿಕ ರಾಜ್ಯದಲ್ಲಿ ಎರಡನೇ ಬಾರಿ ನಡೆಯುತ್ತಿರುವ ಮಹತ್ವದ ಸಭೆ ಇದಾಗಿದೆ ಎಂದರು.

ಇದರೊಂದಿಗೆ ಕಟ್ಟಡ ಕಾರ್ಮಿಕ ಮಹಿಳೆಯರ ಉಪಸಮಿತಿ ಸಭೆಯು ನಡೆಯಲಿದ್ದು, ಇದರಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಹಿಡಿದು ಈಶಾನ್ಯ ಭಾರತದ ಅಸ್ಸಾಂ, ಮಣಿಪುರದವರೆಗಿನ ಸುಮಾರು 140ಕ್ಕೂ ಅಧಿಕ ಕಾರ್ಮಿಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಬಾಲಕೃಷ್ಣ ಶೆಟ್ಟಿ ವಿವರಿಸಿದರು.

ದೇಶದಲ್ಲಿ ಕಾರ್ಮಿಕರ ಇಂದಿನ ಸ್ಥಿತಿ-ಗತಿ, ಕಟ್ಟಡ ಕಾರ್ಮಿಕರ ಪರಿಸ್ಥಿತಿ, ಈಗಿರುವ ಕಾನೂನುಗಳನ್ನು ರಕ್ಷಿಸುವುದು, ರಚನೆಯಾಗಿರುವ ಕಲ್ಯಾಣ ಮಂಡಳಿಗಳನ್ನು ಉಳಿಸಿಕೊಳ್ಳುವುದು ಹಾಗೂ ಕಾರ್ಮಿಕರಿಗೆ ಸಿಗುತಿದ್ದ ಈಗ ಸಾಕಷ್ಟು ಮೊಟಕುಗೊಂಡಿರುವ ಸೌಲಭ್ಯಗಳನ್ನು ರಕ್ಷಿಸುವ ಕುರಿತು ಇರುವ ಸವಾಲುಗಳ ಕುರಿತು ಮೂರು ದಿನಗಳ ಸಮಾವೇಶ ದಲ್ಲಿ ಚರ್ಚಿಸಿ, ಮುಂದಿನ ಚಳವಳಿಯನ್ನು ರೂಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಸಮಾವೇಶವು ಲಿಕೋ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿದೆ. ಆ.28ರಂದು ಮಹಿಳಾ ಉಪಸಮಿತಿ ಸಭೆ ನಡೆಯಲಿದ್ದು, ಉಳಿದೆರಡು ದಿನಗಳಂದು ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಆ.29ರಂದು ಸಂಜೆ 4 ಗಂಟೆಗೆ ಅಜ್ಜರಕಾಡು ಹುತಾತ್ಮ ಚೌಕದ ಬಳಿ ಬಹಿರಂಗ ಸಭೆ ನಡೆಯಲಿದೆ ಎಂದೂ ಅವರು ತಿಳಿಸಿದರು.

ಬಹಿರಂಗ ಸಭೆಯಲ್ಲಿ ಅಖಿಲ ಭಾರತ ಅಧ್ಯಕ್ಷೆ ಡಾ.ಹೇಮಲತಾ, ಪ್ರಧಾನ ಕಾರ್ಯದರ್ಶಿ ಯು.ಪಿ.ಜೋಸೆಫ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಬಾಲಕೃಷ್ಣ ಶೆಟ್ಟಿ ಹಾಗೂ ಕಾರ್ಯದರ್ಶಿ ಕೆ.ಮಹಾಂತೇಶ್ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶೇಖರ ಬಂಗೇರ, ಕಾರ್ಯದರ್ಶಿ ಸುಭಾಸ್ ನಾಯಕ್, ಉಪಾಧ್ಯಕ್ಷರಾದ ಸುರೇಶ್ ಕಲ್ಲಾಗರ, ಕವಿರಾಜ್, ದಯಾನಂದ, ಖಜಾಂಚಿ ಶಶಿಧರ ಗೊಲ್ಲ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News