ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ -ತ್ರೋಬಾಲ್ ಪಂದ್ಯಾಟ
ಉಡುಪಿ, ಅ.1: ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು ಪ್ರತಿಯೊಬ್ಬರೂ ಕೂಡ ಕ್ರೀಡಾ ಮನೋಭಾವ ಬೆಳಿಸಿ ಕೊಳ್ಳಬೇಕು ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಕುಲಪತಿ ವಂ.ಡಾ.ರೋಶನ್ ಡಿಸೋಜ ಹೇಳಿದ್ದಾರೆ.
ಕಟಪಾಡಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚ್‌ನ ಅಮೃತ ಮಹೋತ್ಸವದ ಪ್ರಯುಕ್ತ ಕಟಪಾಡಿ ಎಸ್‌ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಧರ್ಮಪ್ರಾಂತ್ಯದ ವಿವಿಧ ಧರ್ಮಕೇಂದ್ರಗಳ ಮಧ್ಯೆ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿ ಮೂಲವಾಗಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಎರಡನ್ನೂ ಕೂಡ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಜೆಸಿಐ ಕಟಪಾಡಿ ಅಧ್ಯಕ್ಷೆ ಜ್ಯೋತಿ ಶಂಕರ್ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ.ರಾಜೇಶ್ ಪಸನ್ನ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಯೋಜಕ ಲೂಯಿಸ್ ಡಿಸಿಲ್ವಾ, ಪಂದ್ಯಾಟದ ಸಂಚಾಲಕ ಕಿರಣ್ ಲೂವಿಸ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ತೆರೆಸಾ ಲೋಬೊ ಸ್ವಾಗತಿಸಿದರು. ಜಾನೆಟ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಂದ್ಯಾಟದ ತೀರ್ಪುಗಾರರಾಗಿ ಪ್ರಶಾಂತ್, ವಿನಯ್ ಶೇಟ್, ಸ್ಟೀವನ್ ಪಿಂಟೊ ಸಹಕರಿಸಿದರು.