ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ವಿದ್ಯಾರ್ಥಿ ನಿಲಯಗಳಿಗೆ ಭೇಟಿ, ಪರಿಶೀಲನೆ
ಉಡುಪಿ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ, ಕ್ರೈಸ್ತ್ ಶಾಲೆಗಳು ಹಾಗೂ ಆಶ್ರಮ ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಕೊಠಡಿ, ಅಡುಗೆ ಮನೆ, ಆಹಾರ ವಸ್ತುಗಳ ದಾಸ್ತಾನು ಕೇಂದ್ರ, ಸ್ನಾನಗೃಹ, ಶೌಚಾಲಯ, ವಿದ್ಯಾರ್ಥಿಗಳು ತಂಗುವ ಕೊಠಡಿ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಅವರು ಕೂಲಂಕಷ ವಾಗಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಸತಿ ಗೃಹಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಪೂರಕ ವಾತಾವರಣ ನಿರ್ಮಿಸಿ, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಾಸ್ಟೆಲ್‌ಗಳಲ್ಲಿರುವ ಸಿಬ್ಬಂದಿ ಕೊರತೆ, ಸ್ವಚ್ಛತಾಗಾರರಿಗೆ ನೀಡುತ್ತಿರುವ ಸೇವಾ ಹಣವು ಮಾಸಿಕ 1000 ಹಾಗೂ ಮಕ್ಕಳಿಗೆ ಸಂಜೆಯ ವೇಳೆಯಲ್ಲಿ ಟ್ಯೂಷನ್ ನೀಡುತ್ತಿರುವ ಅಂಶಕಾಲಿಕ ಬೋಧಕರಿಗೆ ನೀಡುತ್ತಿರುವ ಗೌರವ ಧನ 1000 ರೂ. ಇರುವ ಬಗ್ಗೆ ಮಾಹಿತಿ ಪಡೆದ ಅವರು, ಇವುಗಳನ್ನು ಸರಕಾರದ ಗಮನಕ್ಕೆ ತಂದು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗು ವುದು ಎಂದರು.
ಇಂದು ಭೇಟಿ ನೀಡಿದ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ, ಊಟೋಪಚಾರದ ವ್ಯವಸ್ಥೆ ಉತ್ತಮ ರೀತಿಯಲ್ಲಿ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್‌ನಲ್ಲಿರುವ ನ್ಯೂನ್ಯತೆಗಳ ಬಗ್ಗೆ ಮಾಹಿತಿ ಪಡೆದ ಅವರು, ಆಶ್ರಮ ಶಾಲಾ ವಿದ್ಯಾರ್ಥಿ ಗಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆ ಹಾಗೂ ಗಣಿತದ ಲೆಕ್ಕಗಳನ್ನು ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಕಪ್ಪ ಆರ್ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.