ಉಡುಪಿ ಜಿಲ್ಲಾ ಪೊಲೀಸ್ ನಾಯಿ ‘ಐಕಾನ್’ ನಿವೃತ್ತಿ

Update: 2024-08-30 13:32 GMT

ಉಡುಪಿ: ಕಳೆದ 10 ವರ್ಷ 25 ದಿನಗಳಿಂದ ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ನಾಯಿ ‘ಐಕಾನ್’ ಸೇವಾ ನಿವೃತ್ತಿ ಹೊಂದಿದೆ.

ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಈ ಶ್ವಾನ 2014ರ ಆಗಸ್ಟ್ 5ರಂದು ಜನಿಸಿದ್ದು, ಅದೇ ವರ್ಷದ ನವೆಂಬರ್ 5ರಂದು ಪೊಲೀಸ್ ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿತ್ತು. ಗಣೇಶ ಎಂ. (ಎಪಿಸಿ 1444) ಇವರು ಐಕಾನ್‌ನ ತರಬೇತುದಾರ ಹಾಗೂ ನಿರ್ವಾಹಕ (ಹ್ಯಾಂಡ್ಲರ್) ಆಗಿ ಕರ್ತವ್ಯ ನಿರ್ವಹಿಸಿದ್ದರು.

ಐಕಾನ್ 2015ರ ಆಗಸ್ಟ್‌ವರೆಗೆ ಅಂದರೆ ಸುಮಾರು ಒಂಭತ್ತು ತಿಂಗಳ ಕಾಲ ಸಿಎಆರ್ ಸೌತ್ ಆಡುಗೋಡಿಯಲ್ಲಿ ಸ್ಪೋಟಕ ಪತ್ತೆ ಕುರಿತಂತೆ ಕಠಿಣ ತರಬೇತಿಯನ್ನು ಪಡೆದು ಉಡುಪಿ ಜಿಲ್ಲೆಯಲ್ಲಿ ಹಾಗೂ ಹೊರ ಜಿಲ್ಲೆಯಲ್ಲಿ ಸುಮಾರು 417ಕ್ಕೂ ಅಧಿಕ ಸಂದರ್ಭಗಳಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿತ್ತು.

ಈ ಶ್ವಾನವು ಉಡುಪಿ ಹಾಗೂ ಹೊರಜಿಲ್ಲೆಗಳಿಗೆ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು, ವಿದೇಶಿ ಗಣ್ಯರು ಹಾಗೂ ಗಣ್ಯಾತಿಗಣ್ಯರು ಆಗಮಿಸಿದ ಸಂದರ್ಭಗಳಲ್ಲಿ ಹಾಗೂ ಏರ್ ಶೋ, ಜಿ-20 ಶೃಂಗಸಭೆ, ದತ್ತ ಜಯಂತಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಪೋಟಕ ಪತ್ತೆಯ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿತ್ತು.

ಅಲ್ಲದೇ ಜಿಲ್ಲೆಯಲ್ಲೇ ನಡೆದ ಸಾಗರ ಕವಚ ಹಾಗೂ ಪ್ರತಿನಿತ್ಯದ ಕರ್ತವ್ಯ ದಲ್ಲಿ ಮಲ್ಪೆ ಬಂದರು, ಕಾಪು ಲೈಟ್‌ಹೌಸ್, ಮಣಿಪಾಲ ಯೂನಿವರ್ಸಿಟಿ, ರೈಲ್ವೇ ನಿಲ್ದಾಣ, ನಾಗಾರ್ಜುನ, ಮೈಸೂರು ದಸರಾ, ನ್ಯಾಷನಲ್ ನಾರ್ಕೋಟಿಕ್ಸ್ ಕಾನ್ಫರೆನ್ಸ್, ಬ್ರಹ್ಮಾವರದಲ್ಲಿ ಕಚ್ಚಾ ಬಾಂಬ್ ಪತ್ತೆ ಇತ್ಯಾದಿ ಸಂದರ್ಭಗಳಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿತ್ತು.

ಐಕಾನ್ 2020ರ ಫೆಬ್ರವರಿಯಲ್ಲಿ ನಡೆದ ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿಯ ಪದಕ ಪಡೆದು ಉಡುಪಿ ಜಿಲ್ಲೆಗೆ ಹಾಗೂ ಪೊಲೀಸ್ ಇಲಾಖೆಗೆ ಗೌರವ ತಂದು ಕೊಟ್ಟಿತ್ತು.

ಈ ಶ್ವಾನದ ಸೇವಾ ನಿವೃತ್ತಿ ಸಂದರ್ಭದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಉಪಾಧೀಕ್ಷಕ ತಿಮ್ಮಪ್ಪ ಗೌಡ ಜಿ., ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನಿರೀಕ್ಷಕ ಎಸ್. ರವಿಕುಮಾರ್ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News