ಉಡುಪಿ: ಅ. 28ರಿಂದ ನಾಲ್ಕನೇ ವಿಶ್ವ ಬಂಟರ ಸಮ್ಮೇಳನ-2023

Update: 2023-10-25 16:27 GMT

ಉಡುಪಿ, ಅ.25: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ‘ನಾಲ್ಕನೇ ವಿಶ್ವ ಬಂಟರ ಸಮ್ಮೇಳನ- 2023’(ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಅ.28 ಮತ್ತು 29ರಂದು ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿಯ ಅಜ್ಜರಕಾಡು ಕ್ರೀಡಾಂಗಣ ಹಾಗೂ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ವಿಶ್ವ ಬಂಟರ ಸಮ್ಮೇಳನ, ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ವಿವರಗಳನ್ನು ನೀಡಿದರು.

ವಿಶ್ವದಾದ್ಯಂತವಿರುವ 128 ವಿವಿಧ ಬಂಟರ ಸಂಘಗಳ ಸಮಗ್ರ ಒಕ್ಕೂಟವೇ ಜಾಗತಿಕ ಬಂಟರ ಸಂಘಗಳ ಒಕ್ಕೂಟವಾ ಗಿದ್ದು, ಇದು ಹಮ್ಮಿಕೊಂಡಿರು ನಾಲ್ಕನೇ ವಿಶ್ವ ಸಮಾವೇಶದಲ್ಲಿ 50,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಎಲ್ಲಾ ಸಮಾಜದ ಎಲ್ಲಾ ವರ್ಗದ ವರನ್ನು ನಾವು ಈ ಸಮ್ಮೇಳನಕ್ಕೆ ಆಹ್ವಾನಿಸಿದ್ದೇವೆ ಎಂದೂ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಉದ್ಘಾಟನೆ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅ.28ರ ಶನಿವಾರ ಬೆಳಗ್ಗೆ 11:00ಗಂಟೆಗೆ ಸಮ್ಮೇಳನವನ್ನು ಅಜ್ಜರಕಾಡು ಮೈದಾನದಲ್ಲಿ ಉದ್ಘಾಟಿಸುವರು ಎಂದರು. ಅಂದು ಬೆಳಗ್ಗೆ 9ಗಂಟೆಗೆ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಬೃಹತ್ ಮೆರವಣಿಗೆಯೊಂದು ಅಜ್ಜರಕಾಡು ಮೈದಾನದವರೆ ಗೆ ನಡೆಯಲಿದೆ. ಈ ಮೆರವಣಿಗೆ ನಗರಸಭೆ, ಕೋರ್ಟ್ ರೋಡ್, ಜೋಡುಕಟ್ಟೆ, ಭುಜಂಗ ಪಾರ್ಕ್ ಮಾರ್ಗವಾಗಿ ಸಾಗಲಿದ್ದು, ಇದರಲ್ಲಿ 62ಕ್ಕೂ ಅಧಿಕ ಬಂಟರ ಸಂಘಗಳ 6ರಿಂದ 7ಸಾವಿರ ಮಂದಿ ವಿವಿಧ ಕಲಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಪಾಲ್ಗೊಳ್ಳುವರು ಎಂದರು.

ಅಜ್ಜರಕಾಡು ಮೈದಾನದಲ್ಲಿ ಎಲ್ಲ ಬಂಟರ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ, ಕ್ರೀಡೋತ್ಸವಕ್ಕೂ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಏಷ್ಯನ್ ಗೇಮ್ಸ್ ವಿಜೇತ ಚಿರಾಗ್ ಶೆಟ್ಟಿ, ಅಂಡರ್ 19 ವಿಶ್ವ ಜೂನಿಯರ್ ಚ್ಯಾಂಪಿಯನ್‌ಶಿಪ್ ವಿಜೇತ ಅಯುಷ್ ಶೆಟ್ಟಿ ಕಾರ್ಕಳ ಜೊತೆಗಿರಲಿದ್ದಾರೆ.

ಅಜ್ಜರಕಾಡಿನ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆಯುವ ಉದ್ಘಾಟನೆಯ ಸಂದರ್ಭದಲ್ಲಿ ಉಡುಪಿ ಪುತ್ತಿಗೆ ಮಠ, ಪಲಿಮಾರು ಮಠ, ಒಡಿಯೂರು ಗುರುದೇವದತ್ತ ಸಂಸ್ಥಾನ, ಬಾರ್ಕೂರು ಬಾರ್ಗವ ಮಹಾಸಂಸ್ಥಾನ, ಕೇಮಾರು ಸಾಂದೀಪನಿ ಆಶ್ರಮ, ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಗಳು ಉಪಸ್ಥಿತರಿರುವರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಬಿ.ರಮಾನಾಥ ರೈ, ಎ.ಜೆ. ಸಮೂಹ ಸಂಸ್ಥೆಯ ಡಾ.ಎ.ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.

ಬಹುಮಾನ ವಿತರಣೆ: ಕ್ರೀಡೋತ್ಸವದಲ್ಲಿ ಜಾಗತಿಕ ಬಂಟರ ಸಂಘಗಳ ವಿವಿಧ ತಂಡಗಳು ಭಾಗವಹಿಸಲಿದ್ದು, ಏಕಕಾಲ ದಲ್ಲಿ ಪುರುಷರ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರ ತ್ರೋಬಾಲ್, ಹಗ್ಗಜಗ್ಗಾಟ ನಡೆಯಲಿದೆ ಹಾಗೂ ಎಲ್ಲಾ ವಯೋಮಾನದವರಿಗೆ ಅಥ್ಲೆಟಿಕ್ ಸ್ಪರ್ಧೆ ನಡೆಯಲಿದೆ. ಪ್ರತೀ ವಿಭಾಗದ ವಿಜೇತ ತಂಡಗಳಿಗೆ ನಗದು ಬಹುಮಾನ ಪ್ರಥಮ-1,00,000, ದ್ವಿತೀಯ- 75,000 ತೃತೀಯ ಹಾಗೂ ಚತುರ್ಥ ತಲಾ 50,000 ನಗದು ಹಾಗೂ ಬಂಟರ ಕಪ್ ನೀಡಿ ಗೌರವಿಸಲಾಗುವುದು. ಸಂಜೆ ಎಂಟು ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಹೊನಲು ಬೆಳಕಿನ ಕಬಡ್ಡಿ, ಸನ್ಮಾನ: ಅ.28ರಂದು ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ಪ್ರೊ ಕಬಡ್ಡಿ ಮಾದರಿಯಲ್ಲಿ ಎಂಟು ತಂಡಗಳ ಮಧ್ಯೆ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅದೇ ವೇದಿಕೆಯಲ್ಲಿ ಸಮಾಜದ ಪ್ರಮುಖ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಬ್ಯಾಡ್ಮಿಂಟನ್ ಏಷ್ಯನ್ ಗೇಮ್ಸ್ ವಿಜೇತ ಚಿರಾಗ್ ಶೆಟ್ಟಿ, ಅಂಡರ್ 19 ವರ್ಲ್ಡ್ ಜೂನಿಯರ್ ಚಾಂಪಿಯನ್ ಅಯುಷ್ ಶೆಟ್ಟಿ ಕಾರ್ಕಳ, ಡಾ. ಎ. ಸದಾನಂದ ಶೆಟ್ಟಿ ಮಂಗಳೂರು, ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕೆ.ಪ್ರಕಾಶ್ ಶೆಟ್ಟಿ, ಚಂದ್ರಹಾಸ ಕೆ.ಶೆಟ್ಟಿ, ಪ್ರವೀಣ್ ಶೆಟ್ಟಿ ವಕ್ವಾಡಿ, ಸತೀಶ್ ಶೆಟ್ಟಿ ಪಟ್ಲ, ಸಂತೋಷ್ ಶೆಟ್ಟಿ ಪುಣೆ, ವಿಶು ಶೆಟ್ಟಿ ಅಂಬಲಪಾಡಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಿನಿತಾರೆಯರ ಮೆರುಗು: ಸಮ್ಮೇಳನದಲ್ಲಿ ದೇಶದ ಪ್ರಮುಖ ಸಿನಿತಾರೆ ಯರಾದ ಸುನಿಲ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ ಕುಂದ್ರಾ, ರಿಷಬ್ ಶೆಟ್ಟಿ, ಗುರುಕಿರಣ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಶಿವಧ್ವಜ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ರೂಪೇಶ್ ಶೆಟ್ಟಿ, ಯಶ್ ಹಾಗೂ ಭಾರತದ ಹೆಸರಾಂತ ಚಿತ್ರತಾರೆಯರು, ನಿರ್ಮಾಪಕರು, ನಿರ್ದೇಶಕರು ಭಾಗವಹಿಸಲಿದ್ದಾರೆ.

29ರಂದು ನಿತಿನ್ ಗಡ್ಕರಿ, ಡಾ.ಪರಮೇಶ್ವರ್: ಮರುದಿನ ಅ.29ರ ರವಿವಾರ ಸಾಂಸ್ಕೃತಿಕ ವೈಭವದ ಉದ್ಘಾಟನಾ ಸಮಾರಂಭ ಬೆಳಗ್ಗೆ 9:00 ಗಂಟೆಗೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸುವರು ಎಂದು ಏಕಳ ಹರೀಶ್ ಶೆಟ್ಟಿ ನುಡಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮೋಹನ್ ಆಳ್ವಾ, ಮುಂಬೈ ಉತ್ತರ ಸಂಸದ ಗೋಪಾಲ ಶೆಟ್ಟಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿರುವರು.

ಸಾಂಸ್ಕೃತಿಕ ವೈಭವದಲ್ಲಿ ಸುಮಾರು 30 ತಂಡಗಳು ಸ್ಪರ್ಧಿಸಲಿವೆ. ಗುತ್ತಿನ ಅರಮನೆಯ ವೇದಿಕೆಯಲ್ಲಿ ಸ್ಪರ್ಧೆ ನಡೆಯ ಲಿದೆ. ಅಲ್ಲದೇ ದಿನದಲ್ಲಿ ಎರಡು ವಿಚಾರಗೋಷ್ಠಿಗಳು 11:00ರಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಭವನದಲ್ಲಿ ನಡೆಯಲಿವೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ವಿಶ್ವ ಬಂಟರ ಕ್ರೀಡಾ ಕೂಟದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರು, ಡಾ.ರೋಶನ್‌ಕುಮಾರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಶ್ರೀನಾಗೇಶ ಹೆಗ್ಡೆ, ಕರ್ನೂರು ಮೋಹನ ರೈ ಉಪಸ್ಥಿತರಿದ್ದರು. 




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News