ಉಡುಪಿ: ಆ. 25ರಂದು ಗುರು ಸಂದೇಶ ಸಾಮರಸ್ಯ ಜಾಥಾ; ಶ್ರೀನಾರಾಯಣಗುರುಗಳ ಜನ್ಮದಿನಾಚರಣೆ
ಉಡುಪಿ, ಆ.23: ಶ್ರೀನಾರಾಯಣಗುರುಗಳ 170ನೇ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆ.25ರ ರವಿವಾರ ಗುರು ಸಂದೇಶ ಸಾಮರಸ್ಯ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿವಾರ ಅಪರಾಹ್ನ 2 ಗಂಟೆಗೆ ಬನ್ನಂಜೆ ಯಲ್ಲಿರುವ ಬಿಲ್ಲವರ ಸೇವಾ ಸಂಘದಲ್ಲಿ ಗುರು ಸಂದೇಶ ಸಾಮರಸ್ಯ ಜಾಥಾ ರಥಕ್ಕೆ ಚಾಲನೆ ನೀಡಲಾಗುವುದು ಎಂದರು. ಈ ವೇಳೆ ಶಾಸಕ ಯಶಪಾಲ್ ಎ.ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ ಸನಿಲ್ ಉಪಸ್ಥಿತರಿರುವರು ಎಂದರು.
ಜಾಥಾವು ಬನ್ನಂಜೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ, ಕೋರ್ಟ್ ರೋಡ್, ಜೋಡುಕಟ್ಟೆ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್, ಕರಾವಳಿ ಬೈಪಾಸ್, ಅಂಬಾಗಿಲು, ಗುಂಡಿಬೈಲು, ಕಲ್ಸಂಕ ಮಾರ್ಗವಾಗಿ ಬನ್ನಂಜೆ ತಲುಪಲಿದೆ. ಜಾಥಾ ಪ್ರಾರಂಭಗೊಂಡ ಬಳಿಕ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ವೃತ್ತಿಪರ ಮೇಳದ ಕಲಾವಿದರಿಂದ ‘ತುಳುನಾಡ ಬಲಿಯೇಂದ್ರ’ ತೆಂಕುತಿಟ್ಟು ತುಳು ಯಕ್ಷಗಾನ ನಡೆಯಲಿದೆ ಎಂದು ಅವರು ವಿವರಿಸಿದರು.
ಸಂಜೆ 5 ಗಂಟೆಗೆ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿದಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕಾರ್ಕಳ ಶಾಸಕ ಸುನಿಲ್‌ಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸೇರಿದಂತೆ ಬಿಲ್ಲವ ಸಮುದಾಯದ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಬಿಲ್ಲವ ಸಮುದಾಯದ ಪ್ರಮುಖ ಬೇಡಿಕೆಗಳಾದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಾರಾಯಣ ಗುರುಗಳ ಪುತ್ಥಳಿ ಪ್ರತಿಷ್ಠಾಪನೆ, ನಾರಾಯಣಗುರು ನಿಗಮದ ಸ್ಥಾಪನೆ ಹಾಗೂ 500 ಕೋಟಿ ರೂ. ಅನು ದಾನ ಮಂಜೂರಾತಿಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಪ್ರವೀಣ್ ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಗೌರವ ಸಲಹೆಗಾರರಾದ ಸುಧಾಕರ ಡಿ.ಅಮೀನ್ ಪಾಂಗಾಳ, ಸಂಚಾಲಕ ಕೃಷ್ಣಾನಂದ ಮಲ್ಪೆ, ಉಪಾಧ್ಯಕ್ಷ ಪಿತ್ರೋಡಿ ವಿಜಯ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಲ್ಮಾಡಿ ಹಾಗೂ ಎಂ.ಮಹೇಶ ಕುಮಾರ್ ಉಪಸ್ಥಿತರಿದ್ದರು.