ಉಡುಪಿ: ಗಾಳಿ-ಮಳೆ, ಸಿಡಿಲಿಗೆ ಭಾರೀ ಹಾನಿ
ಉಡುಪಿ, ಅ.31: ರವಿವಾರ ಮತ್ತು ಸೋಮವಾರ ಬೀಸಿದ ಬಾರೀ ಗಾಳಿ-ಮಳೆ ಹಾಗೂ ಸಿಡಿಲಿಗೆ ಕಾರ್ಕಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾಗೂ ಉಡುಪಿ ಮತ್ತು ಕುಂದಾಪುರ ತಾಲೂಕುಗಳ ಅಲ್ಲಲ್ಲಿ ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಅಂದು ಸಂಜೆ ಬೀಸಿದ ಗಾಳಿ-ಮಳೆಗೆ ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಹತ್ತು ಮನೆಗಳಿಗೆ ಭಾಗಶ:ದಿಂದ ಭಾರೀ ಹಾನಿಯಾದ ವರದಿ ಬಂದಿದ್ದು, ಇದರಿಂದ 75 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಹಾನಿ ಸಂಭವಿಸಿದೆ.
ಅಲ್ಲದೇ ಅದೇ ತಾಲೂಕಿನ ಕಣಜಾರು, ಕಾಂತಾವರ ಹಾಗೂ ಸಾಣೂರು ಗ್ರಾಮಗಳ ಮನೆಗಳಿಗೂ ಮರಬಿದ್ದು, ಸಿಡಿಲು ಬಡಿದು ಹಾನಿಯಾಗಿದ್ದು 70ರಿಂದ 80 ಸಾವಿರ ರೂ.ನಷ್ಟ ಸಂಭವಿಸಿದೆ. ಇದರೊಂದಿಗೆ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಅಚ್ಚುತ ಎಂಬವರ ಮನೆ ಮೇಲೆ ಮರ ಬಿದ್ದು 40ಸಾವಿರ ರೂ.ನಷ್ಟವಾದ ವರದಿ ಬಂದಿದೆ.
ಬೆಳೆಹಾನಿ: ಅಂದಿನ ಗಾಳಿ-ಮಳೆಯಿಂದ ಎಳ್ಳಾರೆ ಗ್ರಾಮದ ಐವರ ಮನೆಯ ಅಡಿಕೆ-ತೆಂಗಿನ ತೋಟಗಳಿಗೂ ಅಪಾರ ಹಾನಿಯಾಗಿದು, 50 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಇದರೊಂದಿಗೆ ಮುಡಾರು ಗ್ರಾಮದ ಗೋಪಿನಾಥ ನಾಯಕ್ ಎಂಬವರ 50 ಅಡಿಕೆ ಹಾಗೂ 9 ತೆಂಗಿನ ಮರಗಳಿಗೂ ಧರಾಶಾಹಿಯಾಗಿದ್ದು 40 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಕಾಳು ಎಂಬವರ ಮನೆಯ ಅಡಿಕೆ ತೋಟಕ್ಕೂ ರವಿವಾರ ಬೀಸಿದ ಗಾಳಿ-ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.