ಉಡುಪಿ: ರಸ್ತೆ ಮಧ್ಯದಲ್ಲಿಯೇ ಬೃಹತ್ ಕೃತಕ ಹೊಂಡ!
ಉಡುಪಿ, ಸೆ.23: ಹಾವುಂಜೆ ಗ್ರಾಮದ ಅಂಗಡಿಬೆಟ್ಟು ಪ್ರದೇಶದಲ್ಲಿ ಭಾರೀ ಗಾತ್ರದ ಹೊಂಡವೊಂದು ರಸ್ತೆಯ ಮಧ್ಯದಲ್ಲಿಯೇ ಕಾಣಿಸಿಕೊಂಡಿದೆ. ಕಳೆದ ಒಂದು ತಿಂಗಳಿಂದ ಅದು ದೊಡ್ಡದಾಗುತ್ತಾ ವೃತ್ತಾಕಾರದಲ್ಲಿ ಒಳಗೆ ದೊಡ್ಡ ಬಾವಿಯಂತೆ ಕಾಣುತ್ತದೆ.
ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರೂ ಗುಂಡಿ ಮುಚ್ಚುವ ಪ್ರಕ್ರಿಯೆಗೆ ಹೋಗಿಲ್ಲ.
ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವವರಿಗೆ ಈ ಹೊಂಡದಿಂದ ತೊಂದರೆ ಉಂಟಾಗಿದೆ ನಿಜ, ಆದರೆ ಇದೊಂದು ಗುಹಾ ಸಮಾಧಿಯೇ ಅಥವಾ ಸುರಂಗ ಮಾರ್ಗವೇ ಎಂಬುದನ್ನು ಇತಿಹಾಸ ಸಂಶೋಧಕರು ಸ್ಥಳಕ್ಕೆ ಭೇಟಿ ನೀಡಿದರೆ ಸ್ಪಷ್ಟಗೊಳ್ಳಬಹುದು.
ಈ ಹೊಂಡ ದಿನನಿತ್ಯ ದೊಡ್ಡದಾಗುತ್ತಾ ಹೋಗುತ್ತಿದೆ ಅಂಗಡಿಬೆಟ್ಟು ಪ್ರದೇಶದಲ್ಲಿ ಈ ಹಿಂದೆ ಇತಿಹಾಸಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಪರಿಕರಗಳು ಸಿಕ್ಕಿರುವುದು ಇದೆ. ಹೀಗಾಗಿ ಇಲ್ಲಿ ಇತಿಹಾಸ ತಜ್ಞರು ಅಧ್ಯಯನ ನಡೆಸಿರೆ ಸರಿಯಾದ ಮಾಹಿತಿ ಸಿಗಬಹುದು.
ಹಿರಿಯ ಸಂಶೋಧಕರಾದ ಪುರಾತತ್ವಶಾಸ್ತ್ರಜ್ಞ ಪ್ರೊ.ಟಿ ಮುರುಗೇಶಿ ಅವರಿಗೆ ಮಾಹಿತಿ ನೀಡಿದಾಗ ಇದು ಗುಹಾ ಸಮಾಧಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಒಂದೆರಡು ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡುವ ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಸ್ಥಳೀಯರು ಕಲ್ಲು ಬಂಡೆಗಳನ್ನು ಹಾಕಿ ಹೊಂಡವನ್ನು ಸರಿಯಾಗಿ ಮುಚ್ಚುವಂತೆ ಸ್ಥಳೀಯ ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಹೊಂಡ ಮುಚ್ಚಲು ತಂದಿದ್ದ ಮಣ್ಣನ್ನು ಪಕ್ಕದಲ್ಲಿ ಹಾಕಲಾಗಿದೆ.