ಉಡುಪಿ: ಕಲಾವತಿಗೆ ಹಂಪಿ ವಿವಿಯಿಂದ ಡಾಕ್ಟರೇಟ್

Update: 2023-11-15 16:12 GMT

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಸಮೀಪದ ಸೂರಾಲಿನ ಕೊರಗ ಮಹಿಳೆ ಕಲಾವತಿಗೆ ಅವರ ಸಂಶೋಧನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಇಂದು ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ದಿಂದ ಡಾಕ್ಟರೇಟ್ ಪದವಿಯನ್ನು ಘೋಷಿಸಿದೆ.

ಹಂಪಿ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಸಲ್ಲಿಸಿದ ‘ಕೊರಗ ಅದಿಮ ಬುಡಕಟ್ಟಿನ ಸಮಾಜೋ-ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಪಿಎಚ್‌ಡಿ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲು ನಿರ್ಧರಿಸಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪಿಎಚ್‌ಡಿ ಸಮಿತಿಯು ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ.ಚೆಲುವರಾಜ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಸಿದ ಮೌಖಿಕ ಪರೀಕ್ಷೆಯ ಬಳಿಕ ಕಲಾವತಿ ಅವರು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲು ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ.

ಸೂರಾಲ್‌ನವರಾದ ಕಲಾವತಿ ಸೂರಾಲ್‌ನಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸದ ಬಳಿಕ ಕೊಕ್ಕರ್ಣೆಯಲ್ಲಿ ಪಿಯುಸಿ ಹಾಗೂ ಮಂಗಳೂರಿನ ರೋಶನಿ ನಿಲಯದಲ್ಲಿ ಬಿಎಸ್‌ಡಬ್ಲ್ಯುನಲ್ಲಿ ಪದವಿ ಪಡೆದಿದ್ದರು. ಬಳಿಕ ಹಂಪಿ ಕನ್ನಡ ವಿವಿಯ ಸೋಷಿಯಾಲಜಿ ವಿಭಾಗದಿಂದ ಎಂಎ ಪದವಿ ಪಡೆದಿದ್ದರು.

ಕರಾವಳಿಯ ಮೂಲನಿವಾಸಿಗಳೆಂದು ಗುರುತಿಸಿಕೊಂಡಿರುವ ಕೊರಗ ಜನಾಂಗದಿಂದ ಪಿಎಚ್‌ಡಿ ಪದವಿ ಪಡೆದ ಮೊದಲ ಮಹಿಳೆ ಸವಿತಾ ಗುಂಡ್ಮಿ. ಇವರು ಈಗ ಮಂಗಳೂರು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News