ಉಡುಪಿ: ಅ.29ರಂದು ಕೆಸಿಸಿಸಿಐ ಪ್ರೇರಣಾ ಪ್ರಶಸ್ತಿ-2023 ಪ್ರದಾನ

Update: 2023-10-27 14:42 GMT

ಉಡುಪಿ, ಅ.27: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಕೆಸಿಸಿಸಿಐ) ಇದರ ವತಿಯಿಂದ ಕ್ರೈಸ್ತ ಸಮಾಜದ ಸಾಧಕ ಉದ್ಯಮಿಗಳು, ವ್ಯಾಪಾರಸ್ಥರು, ವೃತ್ತಿಪರರು ಹಾಗೂ ಕೃಷಿಕರಿಗೆ ಈ ವರ್ಷದಿಂದ ನೀಡಲಾಗು ತ್ತಿರುವ ಪ್ರೇರಣಾ ಪ್ರಶಸ್ತಿಗೆ 9 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕೆಸಿಸಿಸಿಐನ ಸ್ಥಾಪಕಾಧ್ಯಕ್ಷ ಜೆರ್ರಿ ವಿನ್ಸೆಂಟ್ ಡಾಯಸ್ ಹೇಳಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 11 ವರ್ಷಗಳ ಹಿಂದೆ 2012ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರ ಕನ್ನಡಗಳನ್ನು ಒಳಗೊಂಡಿದ್ದರೂ, ಸದ್ಯಕ್ಕೆ ಕಾರ್ಯ ಚಟುವಟಿಕೆಗಳನ್ನು ಉಡುಪಿ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ ಎಂದರು.

ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು (ಕೆಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್ ಒರ್ಟೊಡೊಕ್ ಹಾಗೂ ಇತರೆ) ಒಳಗೊಂಡಿರುವ ಕೆಸಿಸಿಸಿಐ, ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ (ಇಫ್ಕಾ) ಇತರ ಕರ್ನಾಟಕ ರಾಜ್ಯ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕುಲಾಸೋ ಅವರ ಕನಸಿನ ಕೂಸಾಗಿದೆ ಎಂದು ಜೆರ್ರಿ ಡಾಯಸ್ ನುಡಿದರು.

ಸಹಕಾರಿ ಸೊಸೈಟಿ ಕಾಯ್ದೆ 1860ರ ಅಡಿಯಲ್ಲಿ ನೊಂದಾವಣೆಗೊಂಡಿರುವ ಕೆಸಿಸಿಸಿಐ ನಗರದ ಮಾಂಡವಿ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಕೇವಲ 30 ಜನರಿಂದ ಪ್ರಾರಂಭಗೊಂಡ ಈ ಸಂಸ್ಥೆಯ ಸದಸ್ಯರ ಸಂಖ್ಯೆ ಈಗ 100ನ್ನು ದಾಟಿದೆ ಎಂದೂ ಅವರು ತಿಳಿಸಿದರು.

ಕಳೆದ 11 ವರ್ಷಗಳಲ್ಲಿ ತನ್ನ ಸದಸ್ಯರಿಗೆ ಉದ್ಯಮಶೀಲತೆ ಶಿಬಿರ, ಕಾರ್ಯಾಗಾರ ಹಾಗೂ ಉದ್ಯಮಕ್ಕೆ ಸಂಬಂಧಪಟ್ಟ ಮಾಹಿತಿ ಶಿಬಿರ, ವಿಚಾರ ವಿನಿಮಯ ಹಾಗೂ ಕಾನೂನು ಮಾಹಿತಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಸಮಾಜದ ಉದ್ಯಮಿಗಳು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಮೊದಲ ಬಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭ ಅ.29ರಂದು ಸಂಜೆ 6:30ಕ್ಕೆ ಕಡಿಯಾಳಿ ಯಲ್ಲಿರುಊವ ಮಾಂಡವಿ ಟ್ರೇಡ್ ಸೆಂಟರ್‌ನ ಮಾಂಡವಿ ಸಭಾಭವನ ದಲ್ಲಿ ನಡೆಯಲಿದೆ. ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಇವರ ಉಪ ಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಡಾ.ಜೆರ್ರಿ ಡಾಯಸ್ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಬಾರಿಯ ಪ್ರೇರಣಾ ಪ್ರಶಸ್ತಿ ವಿಜೇತರು:

ವರ್ಷದ ಉದ್ಯಮಿ ಪ್ರಶಸ್ತಿ: ಕಲ್ಯಾಣಪುರದ ರಾಜೇಶ್‌ಕುಮಾರ್ ಸಾಲಿನ್ಸ್, ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ: ಕಾರ್ಕಳದ ಕರೋಲ್ ವಿಲ್ಮಾ ಡಿಕುನ್ಹಾ, ವರ್ಷದ ಯುವ ಉದ್ಯಮಿ ಪ್ರಶಸ್ತಿ: ಬ್ರಹ್ಮಾವರದ ನಿಯೋನ್ಸ್ ಅಂತೋನಿ ಡಿಸೋಜ, ವರ್ಷದ ಕೃಷಿಕ ಪ್ರಶಸ್ತಿ: ಕುಂದಾಪುರ ತಾಲೂಕು ನಾಡ ಗ್ರಾಮದ ಹರ್ಕೂರು-ಸೇನಾಪುರದ ವಿಲ್ಪ್ರೆಡ್ ಫೆಲಿಕ್ಸ್ ಡಿಸೋಜ.

ಪ್ರೇರಣಾ ವಿಶೇಷ ಪ್ರಶಸ್ತಿ: ಕೋಟೇಶ್ವರದ ಡೇವಿಡ್ ವಿ.ಸಿಕ್ವೇರಾ (ಸಮಾಜ ಸೇವೆ, ಆರೋಗ್ಯ ಕ್ಷೇತ್ರ), ಮೂಡುಬೆಳ್ಳೆಯ ಗ್ಲೆನ್ ಲಾರ್ಸನ್ ರೆಬೆಲ್ಲೊ (ಯುವ ಉದ್ಯಮಿ, ಡ್ರೋನ್ ತಂತ್ರಜ್ಞಾನ ಪರಿಣಿತ), ಮೂಡುಬೆಳ್ಳೆಯ ಲಾರೆನ್ಸ್ ಆಳ್ವ (ಕೃಷಿ ಸಾಧಕ, ಸಮಾಜ ಸೇವಕ).

ಪ್ರೇರಣಾ ಸೇವಾ ಪ್ರಶಸ್ತಿ: ಉಡುಪಿಯ ಮ್ಯೂರಿಯಲ್ ಪ್ರೇಮಲತಾ (ಶಿಕ್ಷಕರ ಕ್ಷೇತ್ರ), ಪಡುಬಿದ್ರಿ ಪಲಿಮಾರಿನ ರುಫಿನಾ ಮೆಂಡೋನ್ಸಾ (ನರ್ಸಿಂಗ್). ಇದರೊಂದಿಗೆ ಪ್ರೇರಣಾ ಪುರಸ್ಕಾರವನ್ನು ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿವಿಧ ಕ್ಷೇತ್ರಗಳ ಸಾಧನೆಗೆ ನೀಡಲಾಗುವುದು ಎಂದು ಜೆರ್ರಿ ಡಾಯಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಸಿಸಿಸಿಐ ಅಧ್ಯಕ್ಷ ಸಂತೋಷ್ ಡಿಸಿಲ್ಪ, ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಉಪಾಧ್ಯಕ್ಷ ಜತಿನ್ ಪುರ್ಟಾಡೊ ಹಾಗೂ ಸ್ಥಾಪಕ ಸದಸ್ಯ ಲೂಯಿಸ್ ಲೋಬೊ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News