ಉಡುಪಿಯಲ್ಲಿ ತಾಯಿ ಮಕ್ಕಳ ಕಗ್ಗೊಲೆ ಪ್ರಕರಣ: ಅಸೂಯೆ, ದ್ವೇಷ ಕಾರಣವೇ?

Update: 2023-11-15 14:34 GMT

ಉಡುಪಿ : ಉಡುಪಿಯ ನೇಜಾರಿನಲ್ಲಿ ರವಿವಾರ ಬೆಳಗ್ಗೆ 23 ವರ್ಷದ ಮಹಿಳೆ ಮತ್ತು ಆಕೆಯ ಕುಟುಂಬದ ಮೂವರು ಸದಸ್ಯರನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪ್ರವೀಣ್‌ ಚೌಗಲೆ, "ಅಸೂಯೆ ಮತ್ತು ದ್ವೇಷದಿಂದ" ಅಪರಾಧ ಎಸಗಿದ್ದಾನೆ ಎಂದು ಪ್ರಕರಣದ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ ಎಂದು indianexpress.com ವರದಿ ಮಾಡಿದೆ.

ಅಯ್ನಾಝ್, ಅವರ ತಾಯಿ ಹಸೀನಾ ಎಂ, ಸಹೋದರಿ ಅಫ್ನಾನ್ ಮತ್ತು ಸಹೋದರ ಅಸೀಮ್ ಅವರನ್ನು ಇರಿದು ಕೊಂದ ಎರಡು ದಿನಗಳ ಬಳಿಕ ಕೊಲೆ ಆರೋಪಿ, ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಪ್ರವೀಣ್ ಅರುಣ್ ಚೌಗುಲೆ (39)ಯನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ರವಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿತ್ತು.

ಪೊಲೀಸ್ ತನಿಖೆಯ ಪ್ರಕಾರ, ಚೌಗುಲೆ ಮಹಾರಾಷ್ಟ್ರದ ಮಾಜಿ ಪೊಲೀಸ್ ಸಿಬ್ಬಂದಿ ಆಗಿದ್ದು, ಈಗ ಏರ್ ಇಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.

ಆರೋಪಿ ಪ್ರವೀಣ್ ವಿವಾಹಿತನಾಗಿದ್ದು, ಕರ್ತವ್ಯದ ಮೇಲೆ ವಿಮಾನಯಾನದ ಸಮಯದಲ್ಲಿ ತನ್ನ ಯುವ ಸಹೋದ್ಯೋಗಿ ಅಯ್ನಾಝ್ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದ, ಆದರೆ ಅಯ್ನಾಝ್ ಆತನ ಪ್ರೀತಿಗೆ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಹೇಳಿದೆ.

"ಪೊಲೀಸ್ ಪ್ರಾಥಮಿಕ ತನಿಖೆಗಳು ಆರೋಪಿಯು ಯಾರನ್ನಾದರೂ ಅತಿಯಾಗಿ ಹಚ್ಚಿಕೊಳ್ಳುವ ವ್ಯಕ್ತಿ ಎಂದು ಗುರುತಿಸಿದೆ. ಅಸೂಯೆ ಮತ್ತು ದ್ವೇಷವೇ ಕೊಲೆಗೆ ಪ್ರಚೋದನೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚೌಗುಲೆ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದು, ಆಕೆಗೆ ಹಿಂದೂ ಹೆಸರಿಡಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು ಮಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಉಡುಪಿ ಪೊಲೀಸರು ಅಯ್ನಾಝ್ ಅವರ ಚಾಟ್‌ಗಳು ಮತ್ತು ಫೋನ್ ದಾಖಲೆಗಳನ್ನು ವಿಶ್ಲೇಷಿಸಿದ ಬಳಿಕ ಸಾಂಗ್ಲಿ ನಿವಾಸಿ ಪ್ರವೀಣ್ ಚೌಗುಲೆಯನ್ನು ಮೊಬೈಲ್ ಫೋನ್ ಲೋಕೇಶನ್, ಡೇಟಾ ದಾಖಲೆ ಸೇರಿದಂತೆ ತಾಂತ್ರಿಕ ದತ್ತಾಂಶಗಳ ಆಧಾರದ ಮೇಲೆ ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲೆಯ ಸಮಯದಲ್ಲಿ ಚೌಗುಲೆ ಫೋನ್ ಸ್ವಿಚ್ ಆಫ್ ಆಗಿದ್ದಿದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಮಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಅಯ್ನಾಝ್ ಸಹೋದರಿ ಅಫ್ನಾನ್ ದೀಪಾವಳಿ ರಜೆಗೆ ಉಡುಪಿಯ ತಮ್ಮ ಮನೆಗೆ ಮರಳಿದ್ದರು. ಅಯ್ನಾಝ್ ಅವರೇ ತಮ್ಮ ಮನೆಯ ವಿಳಾಸವನ್ನು ಆರೋಪಿಯ ಜೊತೆಗೆ ಹಂಚಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಲ್ವರನ್ನು ಕೊಂದ ನಂತರ, ಪ್ರವೀಣ್ ಚೌಗುಲೆ ನೀರಾವರಿ ಇಲಾಖೆ ಇಂಜಿನಿಯರ್ ಆಗಿರುವ ತನ್ನ ಚಿಕ್ಕಪ್ಪನ ಜೊತೆ ದೀಪಾವಳಿಯನ್ನು ಆಚರಿಸಲು ಬೆಳಗಾವಿಯ ಕುಡಚಿಗೆ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೃಪ್ತಿ ಲೇಔಟ್‌ನಲ್ಲಿರುವ ಅಫ್ನಾನ್ ಮನೆಯಲ್ಲಿ ಚೀರಾಟದ ಶಬ್ದ ಕೇಳಿಸಿದ ಬಳಿಕ ನೆರೆಮನೆಯ ಐಫಾ ಅಯೂಬ್ ಅವರಿಗೆ ಕೊಲೆಯಾಗಿರುವ ವಿಚಾರ ತಿಳಿಯಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಗೊಳಗಾದ ಹಸೀನಾಳ ಅತ್ತೆ ಹಾಜಿರಾ ಕೂಡ ಬಾತ್ ರೂಂಗೆ ಬೀಗ ಹಾಕಿಕೊಂಡು ಕೊಲೆಗಾರ ಪರಾರಿಯಾದ ನಂತರ ಸಹಾಯಕ್ಕಾಗಿ ಕೂಗು ಹಾಕಿದ್ದರು.

ಸಂತೆಕಟ್ಟೆ ಸ್ಟ್ಯಾಂಡ್‌ನಿಂದ 8.30 ರಿಂದ 9 ಗಂಟೆ ಸುಮಾರಿಗೆ ತೃಪ್ತಿ ಲೇಔಟ್‌ನಲ್ಲಿರುವ ಸಂತ್ರಸ್ತರ ಮನೆಗೆ, ಆಟೊ ರಿಕ್ಷಾದವನು ಆರೋಪಿಯನ್ನು ಕರೆದೊಯ್ದಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಪ್ರವೀಣ್ ಸುಮಾರು 15 ನಿಮಿಷಗಳ ನಂತರ ಮತ್ತೊಂದು ಆಟೋ ರಿಕ್ಷಾ ಬಾಡಿಗೆಗೆ ಕರೆದೊಯ್ಯಲು ಅದೇ ಆಟೋ ನಿಲ್ದಾಣಕ್ಕೆ ಮರಳಿದ್ದ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News