ಉಡುಪಿ: ಪೊಲೀಸ್ ಅಧಿಕಾರಿ ಹೆಸರಿನಲ್ಲಿ 89 ಲಕ್ಷ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು
ಉಡುಪಿ, ಸೆ.14: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ವರ್ಚುವಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ನಿವಾಸಿ ಸಂತೋಷ ಕುಮಾರ್(45) ಎಂಬವರಿಗೆ ಸೆ.11ರಂದು ಅಪರಿಚಿತರು ಟೆಲಿಕಾಂ ರೆಗ್ಯುಲೇಟರ್‌ಲ ಅಥಾರಿಟಿ ಆಫ್ ಇಂಡಿಯಾದಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ನಿಮ್ಮ ಮೊಬೈಲ್ ನಂಬ್ರದಿಂದ ಕಾನೂನು ಬಾಹಿರ ಜಾಹೀರಾತು ಹಾಗೂ ಅಶ್ಲೀಲ ಸಂದೇಶ ಬಂದಿದ್ದು, ಅದರಂತೆ ನಿಮ್ಮ ಮೇಲೆ ಒಟ್ಟು 17 ಎಫ್.ಐ.ಆರ್ ಆಗಿರುವುದಾಗಿ ತಿಳಿಸಿದರು. ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್ ನಂಬ್ರ ಡಿಸ್ಕನೆಕ್ಟ್ ಮಾಡಲಾಗುವುದು ಮತ್ತು ನಿಮ್ಮ ಮೇಲೆ ಆರೆಸ್ಟ್ ವಾರಂಟು ಆಗಿದೆ ಎಂದು ಬೆದರಿಸಿದ್ದರು.
ನಂತರ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿ ವಾಟ್ಸಪ್ ವಿಡಿಯೋ ಕರೆ ಮಾಡಿದ್ದು, ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿಸಿ ಬ್ಯಾಂಕ್ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದನು. ಖಾತೆಯಲ್ಲಿರುವ ಹಣವನ್ನು ತಾನು ಸೂಚಿಸಿದ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದು, ಹಣದ ಬಗ್ಗೆ ಕ್ಲೀಯರ್ ಆಗುವವರೆಗೆ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದನು.
ಅದರಂತೆ ಸಂತೋಷ್ ಕುಮಾರ್ ಸೆ.12ರಂದು 89,00,000ರೂ. ಹಣವನ್ನು ವರ್ಗಾಯಿಸಿದ್ದರು. ಪೊಲೀಸ್ ಅಧಿಕಾರಿಯವರು ಎಂದು ನಂಬಿಸಿ ಡಿಜಿಟಲ್ ಆರೆಸ್ಟ್ ಮಾಡಿರುವುದಾಗಿ ಬೆದರಿಸಿ ಹಣ ವರ್ಗಾಯಿಸಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.