ಉಡುಪಿ| ಆನ್‌ಲೈನ್ ಟ್ರೇಡಿಂಗ್ ವಂಚನೆ: ನಾಲ್ವರು ಆರೋಪಿಗಳ ಬಂಧನ

Update: 2024-08-22 16:41 GMT

ಉಡುಪಿ: ಉಡುಪಿ ಮೂಲದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ವಂಚನೆ ಮಾಡಿದ ಪ್ರಕರಣದಲ್ಲಿ ಉಡುಪಿ ಸೆನ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಒಟ್ಟು 13 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಳಾದ ಪುತ್ತೂರು ಕುರಿಯ ಗ್ರಾಮದ ಮುಸ್ತಫಾ ಪಿ (36), ಕಾಸರಗೋಡು ಮಂಜೇಶ್ವರದ ಖಾಲಿದ್ (39), ಕಾಸರಗೋಡು ನೀರ್ಚಾಲ್ ಗ್ರಾಮದ ಸಫಾನ್ ಕೆ.ಎ. (22), ಮಂಗಳೂರು ಮೂಲದ ಸತೀಶ್ ಶೇಟ್ (52) ಎನ್ನುವರನ್ನು ಬಂಧಿಸಿ ಅವರಿಂದ 5 ಮೊಬೈಲ್, 13 ಲಕ್ಷ ನಗದನ್ನು ವಶಪಡಿಸಿಕೊಂಡಿದ್ಷಾರೆ.

ಪ್ರಕರಣದ ಪ್ರಮುಖ ಸೂತ್ರಧಾರಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಪ್ರಕರಣದ ಹಿನ್ನೆಲೆ: ಅಪರಿಚಿತ ವ್ಯಕ್ತಿಗಳು ಉಡುಪಿಯ ಉಪೇಂದ್ರ ಎನ್ನುವರಿಗೆ ಕರೆ ಮಾಡಿ ವಾಟ್ಸಾಪ್‌ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್‌ಗೆ ಸೇರಿಸಿದ್ದು. ವಿಐಪಿ-203-845 ಎಂಬ ಅಕೌಂಟ್ ನಂಬರನ್ನು ನೀಡಿದ್ದರು. ವಾಟ್ಸಾಪ್ ಮೂಲಕ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ನೀಡಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, 33 ಲಕ್ಷದ 10 ಸಾವಿರ ಹಣವನ್ನು ಡಿಪಾಸಿಟ್ ಮಾಡಿಸಿಕೊಂಡು ವಂಚಿಸಿದ್ದು. ಈ ಬಗ್ಗೆ ಉಪೇಂದ್ರ ಭಟ್ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ. ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿಗಳಾದ ಸಿದ್ದಲಿಂಗಯ್ಯ ಟಿ.ಎಸ್, ಪರಮೇಶ್ವರ ಹೆಗಡೆ ಮಾರ್ಗದರ್ಶನದಂತೆ ಸೆನ್ ಠಾಣೆ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ, ಎ.ಎಸ್.ಐ ರಾಜೇಶ್, ಸಿಬ್ಬಂದಿಗಳಾದ ಪ್ರವೀಣ ಕುಮಾರ್, ಅರುಣ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘವೇಂದ್ರ, ಪ್ರಶಾಂತ್, ಪ್ರಸನ್ನ ಸಿ. ಸಾಲ್ಯಾನ್, ಚಾಲಕ ಸುದೀಪ್ ಸಹಕರಿಸಿದ್ದರು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಎಸ್ಪಿ ಡಾ. ಅರುಣ ಕೆ ಪ್ರಶಂಶಿಸಿದ್ದು, ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗಿ ಹಣ ಹೂಡಿಕೆ ಮಾಡಬಾರದು ಎಂದು ಎಸ್ಪಿ ತಿಳಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News