ಉಡುಪಿ: ಗ್ರಾಮ ಆಡಳಿತಾಧಿಕಾರಿಗಳಿಂದ ಮುಷ್ಕರ
ಉಡುಪಿ, ಸೆ.26: ಉಡುಪಿ ಜಿಲ್ಲೆಯಲ್ಲಿರುವ 175 ಮಂದಿ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿ ಉಡುಪಿ ಮಿನಿ ವಿಧಾನಸೌಧದ ಎದುರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ರಾಜ್ಯ ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಹಾಗೂ ಮೂಲಭೂತ ಸೌಲಭ್ಯ, ಸೇವಾ ಸೌಲಭ್ಯ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸೀಮ್ ಮತ್ತು ಡೇಟಾ, ಮೊಬೈಲ್ ಆ್ಯಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುವ ಒತ್ತಡವನ್ನು ನಿಲ್ಲಿಸುವ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲೆಯ 7 ತಾಲೂಕಿನಲ್ಲಿ ಎಲ್ಲಾ ಬಗೆಯ ಮೊಬೈಲ್ ಆ್ಯಪ್ ಹಾಗೂ ಅಪ್ಲಿಕೇಶನ್ ಸೇವೆಯನ್ನು ಸ್ಥಗಿತಗೊಳಿಸಿ ಉಡುಪಿ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳು ಗುರುವಾರ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡರು.
ಜಿಲ್ಲೆಯಲ್ಲಿ ಸದ್ಯ ಚುನಾವಣಾ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಯಾಯ ತಾಲೂಕು ಕಚೇರಿಯ ಮುಂಭಾಗ ಕಪ್ಪು ಪಟ್ಟಿ ಧರಿಸಿ ಸರಕಾರದ ವಿರುದ್ಧ ಮೌನ ಮುಷ್ಕರ ಪ್ರಾರಂಭಿಸಿದ್ದಾರೆ.
ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ಕಾರ್ತಿಕೇಯ್ ಭಟ್ ಮಾತನಾಡಿ, ರಾಜ್ಯ ಸಮಿತಿಯ ಸೂಚನೆಯಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಹೋದರೆ ಸೆ. 27ರಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಮಟ್ಟದಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾ ಗುವುದು ಎಂದರು.
ಜಿಲ್ಲೆಯಲ್ಲಿ 175 ಮಂದಿ ಗ್ರಾಮ ಆಡಳಿತಾಧಿಕಾರಿಗಳಿದ್ದು, 101 ಮಂದಿ ಗ್ರಾಮ ಪಂಚಾಯಿತಿನಲ್ಲಿ ಉಳಿದ 74 ಮಂದಿ ಎಸಿ, ಡಿಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೇಡಿಕೆ ಇರುವಷ್ಟು ಸಿಬ್ಬಂದಿಗಳಿಲ್ಲ. ಕೆಲಸದೊತ್ತಡದ ನಡುವೆಯೇ ಜನರಿಗೆ ಸೇವೆಯನ್ನು ನೀಡುತ್ತಿದ್ದು, ಸರಕಾರದ ಸ್ಪಂದನೆ ಇಲ್ಲದೇ ಇರುವುದರಿಂದ ಸೆ.22ರಿಂದ ಮೊಬೈಲ್ ಆ್ಯಪ್‌ನ 21 ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ. ನಮ್ಮ ನ್ಯಾಯಯುತವಾದ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದೇ ಹೋದರೆ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು. ಗುಣಮಟ್ಟದ ಟೇಬಲ್, ಕುರ್ಚಿ, ಗೂಗಲ್ ಕ್ರೋಮ್ ಬುಕ್/ಲ್ಯಾಪ್‌ಟಾಪ್, ಪ್ರಿಂಟರ್, ಸ್ಕ್ಯಾನರ್ ಸಹಿತ ಮೂಲಭೂತ ಸೌಲಭ್ಯ ನೀಡಬೇಕು. ಸೇವಾ ವಿಷಯಗಳಿಗೆ ಸಂಬಂಸಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ರೇಷ್ಮಾ, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಡಿ.ಎಚ್., ಹಿರಿಯ ಗ್ರಾಮ ಲೆಕ್ಕಾಧಿಕಾರಿ ಸುಧಾಕರ್, ಗುರುಪ್ರಸಾದ್, ಪುನೀತ್ ಸಹಿತ ಅನೇಕರು ಉಪಸ್ಥಿತರಿದ್ದರು.