ಉಡುಪಿ: ಅ.30ರಂದು ಯಂಡಮೂರಿ ಪ್ರೇರಣಾ ಭಾಷಣ

Update: 2023-10-25 16:31 GMT

ಉಡುಪಿ, ಅ.25: ಕರ್ನಾಟಕದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿರುವ ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಇವರು ಇದೇ ಅ.30ರ ಸೋಮವಾರ ಬನ್ನಂಜೆಯ ನಾರಾಯಣಗುರು ಸಭಾಂಗಣದಲ್ಲಿ ಪ್ರೇರಣಾ ಭಾಷಣ ಮಾಲಿಕೆಯಲ್ಲಿ ‘ವಿಜಯಕ್ಕೆ ಐದು ಮೆಟ್ಟಲು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಬಿಲ್ಲವರ ಸೇವಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರ ಸಹಕಾರದೊಂದಿಗೆ ಈ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಬೆಳದಿಂಗಳ ಬಾಲೆ, ತುಲಸಿ ದಳ, ವಿಜಯಕ್ಕೆ ಐದು ಮೆಟ್ಟಲು, ವಿಜಯಕ್ಕೆ ಆರನೇ ಮೆಟ್ಟಲು, ತಪ್ಪು ಮಾಡೋಣ ಬನ್ನಿ ಮುಂತಾದ ಜನಪ್ರಿಯ ಕೃತಿಗಳ ಲೇಖಕ ಹಾಗೂ ಪ್ರೇರಣಾ ಭಾಷಣಕಾರರಾದ ಯಂಡಮೂರಿ ಅವರು ಅ.30ರ ಸಂಜೆ 5ರಿಂದ 7ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ‘ಯಶಸ್ಸಿಗೆ ಐದು ಮೆಟ್ಟಲು’ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸ್ವತಹ ಮೊಬೈಲ್ ಹಗೂ ಅಂತರ್ಜಾಲದ ವ್ಯಸನಕ್ಕೆ ತುತ್ತಾಗಿ ಅದರಿಂದ ಹೊರಬರಲು ರೂಬಿಕ್ ಕ್ಯೂಬ್‌ನಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ಗ್ರ್ಯಾಂಡ್‌ಮಾಸ್ಟರ್ ಮುಂಬಯಿಯ ಅಫಾನ್ ಕುಟ್ಟಿ ಅವರು ‘ರೂಬಿಕ್ ಕ್ಯೂಬ್‌ನಿಂದ ಇಂಟರ್ನಟ್ ವ್ಯಸನ ಮುಕ್ತಿ’ ವಿಷಯದ ಕುರಿತು ಉಪನ್ಯಾಸ ನೀಡುವರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಹರ್ಷ ಉಡುಪಿಯ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್ ಕೆ., ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ ಉಪಸ್ಥಿತರಿರುವರು ಎಂದರು.

ಯಂಡಮೂರಿ ಹಾಗೂ ಅಫಾನ್ ಕುಟ್ಟಿ ಅವರು ಅ.29ರಂದು ಸಂಜೆ 5ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಡಾ.ವಿರೂಪಾಕ್ಷ ದೇವರುಮನೆ ಅವರ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡುವರು ಎಂದೂ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಸೌಜನ್ಯ ಶೆಟ್ಟಿ, ಡಾ.ನಾಗರಾಜ ಮೂರ್ತಿ ಹಾಗೂ ಕಸಾಪ ತಾಲೂಕು ಘಟಕದ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News