ಆಟಿ ತಿಂಗಳ ವಿಶಿಷ್ಟ ಕಾರ್ಯಕ್ರಮ ‘ಆಟಿದ ತಿರ್ಲ್’

Update: 2023-08-05 13:34 GMT

ಉಡುಪಿ, ಆ.5: ಉಡುಪಿ ತುಳುಕೂಟ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಲಯನ್ಸ್ ಕ್ಲಬ್ ಉಡುಪಿ ಅಮೃತ್, ಲಯನ್ಸ್ ಕ್ಲಬ್ ಉಡುಪಿ ಚೇತನಾ, ಲಿಯೋ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಹಯೋಗದೊಂದಿಗೆ ಆಟಿದ ತಿರ್ಲ್- 2023 ಕಾರ್ಯಕ್ರಮವನ್ನು ಅಂಬಾಗಿಲು ಅಮೃತ ಗಾರ್ಡನ್‌ನಲ್ಲಿ ಶನಿವಾರ ಹಮ್ಮಿಕೊಳ್ಳ ಲಾಗಿತ್ತು.

‘ನಮ್ಮ ಟಿವಿ’ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ವಿಶೇಷ ಉಪನ್ಯಾಸ ನೀಡಿ, ನಮ್ಮ ಹಿರಿಯರಿಗೆ ಪ್ರಕೃತಿಯ ಬಗ್ಗೆ ಸಾಕಷ್ಟು ಜ್ಞಾನ ಇತ್ತು. ಅದಕ್ಕಾಗಿ ಆಟಿ ತಿಂಗಳಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಪ್ರಕೃತಿದತ್ತ ಆಹಾರವನ್ನು ಸೇವಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆಟಿ ತಿಂಗಳು ಅಂದರೆ ಬದುಕಿನ ಪರೀಕ್ಷೆಯಾಗಿತ್ತು. ಆ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ನಮ್ಮ ಹಿರಿಯರು ಈ ರೀತಿಯ ದಾರಿಯನ್ನು ಕಂಡುಕೊಂಡಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಅಮೃತಾ ಪುರುಷೋತ್ತಮ ಶೆಟ್ಟಿ ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶೀಲಾ ಕೆ.ಶೆಟ್ಟಿ ಎರ್ಮಾಳ್, ವನಜ ಶೆಡ್ತಿ, ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು.

ಬಡಗಬೆಟ್ಟು ಸೊಸೈಟಿಯ ಜನರಲ್ ಮೆನೇಜರ್ ರಾಜೇಶ್ ಶೇರಿಗಾರ್, ಉಡುಪಿ ಅಮೃತ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಹರೀಶ್, ಉಡುಪಿ -ಇಂದ್ರಾಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಲಯನ್ಸ್ ಉಡುಪಿ ಚೇತನಾ ಅಧ್ಯಕ್ಷ ಜಗದೀಶ್ ಆಚಾರ್ಯ, ಉಡುಪಿ- ಇಂದ್ರಾಳಿ ಲಿಯೋ ಕ್ಲಬ್ ಅಧ್ಯಕ್ಷೆ ಅನುಪ್ ಮೋಹನ್ ಶೆಟ್ಟಿ, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.

ಆಟಿಕೂಟದ ಸಂಚಾಲಕಿ ಜ್ಯೋತಿ ಎಸ್.ದೇವಾಡಿಗ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಂದಿಸಿದರು. ಯಶೋಧಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

44 ಬಗೆಯ ಖಾದ್ಯಗಳು!

ಆಟಿದ ತಿರ್ಲ್ ಕಾರ್ಯಕ್ರಮದಲ್ಲಿ ಭೋಜನಕ್ಕೆ ಸುಮಾರು 44 ಬಗೆಯ ತುಳುನಾಡಿನ ವಿವಿಧ ಖಾದ್ಯಗಳನ್ನು ತಯಾರಿಸ ಲಾಗಿತ್ತು. ನೂರಾರು ಸಂಖ್ಯೆಯ ಜನ ಈ ವಿಶಿಷ್ಟ ರೀತಿಯ ತಿನಿಸುಗಳ ರುಚಿಯನ್ನು ಸವಿದರು.

ಬಿರಿಂಡಾ ಸಾರ್, ಅನನಾಸ್ ಸಾರ್, ಕುಕ್ಕು ಸಾರ್, ಕುಡುತ ಸಾರ್, ತಿಮರೆ ಚಟ್ನಿ, ಕುಡು ಚಟ್ನಿ, ತೊಂಜಕ್ ಚಟ್ನಿ, ಬಿರಿಂಡಾ ಚಟ್ನಿ, ಪೆಜಕಾಯಿ ಚಟ್ನಿ, ತೇವುದ ಇರೆತ ಚಟ್ನಿ, ಪತ್ರೋಡೆ, ಉಪ್ಪಡ್ ಪಚ್ಚೀರ್, ತೊಜಂಕ್ ತೊಪ್ಪು, ಬೊಲೆ ಸುಕ್ಕ, ಕೇನೆದ ಪುಂಡಿ, ನೀರ್‌ದೋಸೆ, ಕಣಲೆ ಪದಂಗಿ ಗಸಿ ಪುಂಡಿ ಗಸಿ, ತೋಜಂಕ್ ಅಂಬಡೆ, ಕಾಡುಕಂಚಲ ಪ್ರೈ, ರಾಗಿ ಮಣ್ಣಿ, ಮೆಂತೆ ಗಂಜಿ, ಬಂಗುಡೆ ಮೀನು ಸಾರ್, ಎಟ್ಟಿ ಚಟ್ನಿ, ತೆಕ್ಕರೇ ತಲ್ಲಿ ಮೊದಲಾದ ಖಾದ್ಯಗಳಿದ್ದವು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News