ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ನವೀಕರಣ, ಹೆಸರು ನೊಂದಾಯಿಸಲು ನ.6 ಕೊನೆ ದಿನ: ಉಡುಪಿ ಜಿಲ್ಲಾಧಿಕಾರಿ

Update: 2023-10-19 16:36 GMT

ಉಡುಪಿ, ಅ.19: ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಯ ನವೀಕರಣ ಪ್ರಾರಂಭಗೊಂಡಿದ್ದು, ಈ ಪಟ್ಟಿಗೆ ಹೆಸರು ನೊಂದಾಯಿಸಲು ಮುಂದಿನ ನವೆಂಬರ್ 6 ಕೊನೆಯ ದಿನವಾಗಿರು ತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಚುನಾವಣೆಗೆ ಮುನ್ನ ಈ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಹೊಸ ದಾಗಿ ತಯಾರಿಸಲಾಗುತ್ತಿದೆ. ಈ ಬಾರಿ ಪಟ್ಟಿ ತಯಾರಿಕಾ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಚುನಾವಣಾ ಆಯೋಗ ನಿಗದಿ ಪಡಿಸಿರುವಂತೆ ನ.6 ಕೊನೆಯ ದಿನವಾಗಿರುತ್ತದೆ ಎಂದರು.

ಪದವೀಧರ ಮತದಾರರು ನಮೂನೆ-18ರಲ್ಲಿ ಹಾಗೂ ಶಿಕ್ಷಕರು ನಮೂನೆ-19ರಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ತಾಲೂಕು ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ. ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 2024ರ ಮೊದಲಾ ರ್ಧದಲ್ಲಿ ಹೊಸ ಚುನಾವಣೆ ನಡೆಯಬೇಕಾಗಿದೆ.

ಈ ಚುನಾವಣೆಯಲ್ಲಿ ಭಾಗವಹಿಸಲು ಈ ಹಿಂದಿನ ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಪಡೆದು ನಿಯೋಜಿತ ಅಧಿಕಾರಿಗಳಿಗೆ ಸಲ್ಲಿಸಬೇಕಾಗಿದೆ.

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೊಂದಾಯಿಸಲು ಆಯಾ ಮತಕ್ಷೇತ್ರದೊಳಗೆ ವಾಸವಾಗಿ ರುವ, 2023ರ ನವೆಂಬರ್‌1ಕ್ಕೆ ಮುಂಚೆ ಕನಿಷ್ಠ ಮೂರು ವರ್ಷ ಮೊದಲು ಭಾರತದಲ್ಲಿರುವ ಯಾವುದಾದರೂ ಒಂದು ಮಾನ್ಯತೆ ಪಡೆದಿರುವ ವಿವಿಯಿಂದ ಪದವಿಯನ್ನು ಪಡೆದಿರಬೇಕು. ಅಲ್ಲದೇ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿ ಯೊಬ್ಬ ವ್ಯಕ್ತಿಯೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಅರ್ಹ ನಾಗಿದ್ದಾನೆ. ಆತ ಪದವಿಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ನಮೂನೆ 18ರಲ್ಲಿ ಸೂಚಿಸಿದಂತೆ ಸಂಬಂಧಿತ ವಿವಿ ಅಥವಾ ವಿದ್ಯಾ ಸಂಸ್ಥೆ ನೀಡಿದ ಪದವಿ ಪ್ರಮಾಣಪತ್ರದ ಮೂಲ ಪ್ರತಿ ಅಥವಾ ನಕಲು ಪ್ರತಿಯ ಸ್ವಯಂ ಧೃಡೀಕರಿಸಿದ ಹಾಗೂ ಅಪರ ನಿಯೋಜಿತ ಅಧಿಕಾರಿಗಳಿಂದ ದೃಢೀಕೃತ ಪ್ರತಿ ಸಲ್ಲಿಸಬೇಕು.

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಲು ಅವರು ಅರ್ಹತಾ ದಿನಾಂಕವಾದ 2023ರ ನವೆಂಬರ್‌1ಕ್ಕೆ ತಕ್ಷಣದ ಹಿಂದಿನ ಆರು ವರ್ಷಗಳಲ್ಲಿ ಕನಿಷ್ಠ ಮೂರು ವರ್ಷವಾದರೂ ರಾಜ್ಯ ಸರಕಾರ ನಿರ್ದಿಷ್ಟ ಪಡಿಸಿದ ಪ್ರೌಢ ಶಾಲೆ ಹಾಗೂ ಅದಕ್ಕಿಂತ ಮೇಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಕಾಲಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸಿರಬೇಕು. ಅದು ನಿರಂತರವಾಗಿ ಅಥವಾ ಬಿಡಿ ಬಿಡಿಯಾದ ಮೂರು ವರ್ಷಗಳೂ ಆಗಿರಬಹುದು. ಆದರೆ ಆತ ಈ ಅವಧಿಯಲ್ಲಿ ಕೆಲಸ ಮಾಡಿದ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ನಮೂನೆ19ರೊಂದಿಗೆ ಹಾಜರುಪಡಿಸಬೇಕು ಎಂದರು.

ಆತ ಸದ್ಯ ಶಿಕ್ಷಕ ವೃತ್ತಿಯಲ್ಲಿ ಇಲ್ಲದೇ ಇದ್ದರೂ, ಹಿಂದಿನ ಆರು ವರ್ಷಗಳಲ್ಲಿ ಮೂರು ವರ್ಷ ಶಿಕ್ಷಕನಾಗಿ ದುಡಿದಿದ್ದರೆ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಅರ್ಹರಿದ್ದಾರೆ. ಆದರೆ ಅಂಶಕಾಲಿಕ ಶಿಕ್ಷಕರಿಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೆಸರು ನೊಂದಾಯಿಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಾಲೂಕುಗಳ ತಹಶೀಲ್ದಾರರು, ಶಿರಸ್ತೇದಾರರು ಇವರಿಗೆ ಅರ್ಜಿಗಳನ್ನು ಸಲ್ಲಿಸಿ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.

ಉಡುಪಿ ಜಿಲ್ಲೆಯಲ್ಲಿ ಹಿಂದಿನ ಚುನಾವಣೆಗಳಲ್ಲಿ ಈ ಎರಡೂ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿಕೊಳ್ಳಲು ನಿರಾ ಶಾದಾಯಕ ಪ್ರತಿಕ್ರಿಯೆ ಕಂಡು ಬಂದಿದ್ದು, ಈ ಬಾರಿ ಹೆಚ್ಚಿನ ಮುತುವರ್ಜಿ ವಹಿಸಿ ಸಾಧ್ಯವಿದ್ದಷ್ಟು ಹೆಚ್ಚು ಮಂದಿಯ ಹೆಸರು ನೊಂದಾಯಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಎಲ್ಲರಿಗೂ ಸೂಚನೆಗಳನ್ನು ನೀಡಲಾಗಿದೆ ಎಂದು ಡಾ.ವಿದ್ಯಾ ಕುಮಾರಿ ತಿಳಿಸಿದರು.

ಕಳೆದ ಬಾರಿ ಪದವೀಧರ ಕ್ಷೇತ್ರಕ್ಕೆ 8,636 ಮಂದಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 2768 ಮಂದಿ ಮಾತ್ರ ಹೆಸರು ನೊಂದಾಯಿ ಸಿಕೊಂಡಿದ್ದರು. ಆದರೆ ಮತದಾನ ಮಾತ್ರ ಶೇ.90ರಷ್ಟಾಗಿತ್ತು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News