ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದಲ್ಲಿ ನಮಗೆ ಶೀಘ್ರವಾಗಿ ನ್ಯಾಯ ಸಿಗಬೇಕು: ಸಂಬಂಧಿ ಫಾತಿಮಾ ಅಸ್ಬಾ

Update: 2023-11-17 13:07 GMT

ಉಡುಪಿ: ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದಲ್ಲಿ ನಮಗೆ ಆದಷ್ಟು ಶೀಘ್ರವಾಗಿ ನ್ಯಾಯ ಸಿಗಬೇಕು. ಈಗ ನಮಗೆ ಉಸಿರು ಕಟ್ಟಿದಂತಾಗಿದೆ. ಎಲ್ಲಾ ಮಹಿಳೆ ಯರಿಗೂ ಅಭದ್ರತೆ ಕಾಡುತ್ತಿದೆ. ನ್ಯಾಯ ಸಿಕ್ಕಿದ ನಂತರವೇ ನಾವು ನೆಮ್ಮದಿ ಸಿಗುತ್ತದೆ. ನ್ಯಾಯದ ಜೊತೆ ನಮಗೆ ಭದ್ರತೆ ಕೂಡ ಅಗತ್ಯವಾಗಿ ಬೇಕು ಎಂದು ಮೃತ ಹಸೀನಾರ ಸಹೋದರನ ಪುತ್ರಿ ಫಾತಿಮಾ ಅಸ್ಬಾ ಒತ್ತಾಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಭದ್ರತೆ ಬೇಕು. ಕೇವಲ ತಾತ್ಕಾಲಿಕ ಭದ್ರತೆಯಿಂದ ನಮಗೆ ಏನು ಮಾಡಲು ಆಗುವುದಿಲ್ಲ. ಇಲ್ಲಿ ಕೇವಲ ಕುಟುಂಬದವರು ಮಾತ್ರವಲ್ಲ ನೆರೆಹೊರೆಯವರು, ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಅವರಿಗೆ ಇಲ್ಲಿ ಇರಲು ಭಯ ವಾಗುತ್ತದೆ. ನಮಗೆ ಕಾನೂನಿನ ಮೂಲಕ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರು ಮಹಿಳೆಯರಿಗೆ ಹೆಲ್ಪ್‌ಲೈನ್ ಮಾಡಿಕೊಡಬೇಕು. ಕಾನೂನಿನ ಬಗ್ಗೆ ಭಯ ಇಲ್ಲದೇ ಹಾಡುಹಗಲೇ ಆತ ಕೊಲೆ ಮಾಡಿ ಹೋಗಿದ್ದಾನೆ. ಇದೇ ಮೊದಲು ಇದೇ ಕೊನೆಯಾಗಬೇಕು. ನಮಗೆ ಮನೆಯಿಂದ ಹೊರಗೆ ಹೋಗಲು ಭಯ ಆಗುತ್ತಿದೆ. ನಮ್ಮನ್ನು ಕೇಳುವವರು ಯಾರು ಇಲ್ಲವಾಗಿದೆ ಎಂದು ಅವರು ತಿಳಿಸಿದರು.

ಮೃತಪಟ್ಟವರಿಗೆ ಗೌರವ ತೋರಿಸಬೇಕು. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅವರ ವಿರುದ್ಧ ಇಲಾಖೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದು ಮರಣವೇ ಹೊರತು ಜೋಕ್ ಅಲ್ಲ. ಸತ್ತವರ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಅವರು ಮನವಿ ಮಾಡಿದರು.

‘ಇಡೀ ದೇಶದಲ್ಲಿ ನನ್ನ ಸಹೋದರಿಗೆ ಆಗಿರುವುದು ಯಾವ ಹೆಣ್ಣು ಮಕ್ಕಳಿಗೂ ಆಗಬಾರದು. ಆ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ನನ್ನ ಸಹೋದರಿಗೆ ನ್ಯಾಯ ಸಿಗಲು ಸಾಧ್ಯ’

-ಫಾತಿಮಾ ಅಸ್ಬಾ, ಸಂಬಂಧಿ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News