ಓದುವ ಸಂಸ್ಕೃತಿ ಇಲ್ಲದ ಕಾಲದಲ್ಲಿ ಓದುಗರೇ ಸಿಗಲ್ಲ: ಕೆ.ಪಿ.ರಾವ್
ಉಡುಪಿ : ಪುಸ್ತಕ ಹುಟ್ಟುವುದು ಲೇಖಕನ ತಲೆಯಲ್ಲಿ. ಅದು ಅಲ್ಲಿಯೇ ಲೋಕಾಪರ್ಣೆ ಆಗಿರುತ್ತದೆ. ಓದುವ ಸಂಸ್ಕೃತಿ ಕಳೆದೇ ಹೋಗಿರುವ ಈ ಕಾಲದಲ್ಲಿ ಪುಸ್ತಕವನ್ನು ನಿಜವಾಗಿ ಕೊಂಡು ಓದುಗರೇ ಸಿಗುವುದೇ ದೊಡ್ಡ ಸಂಶಯ ಎಂದು ಹಿರಿಯ ವಿಜ್ಞಾನಿ ನಾಡೋಜ ಕೆ.ಪಿ.ರಾವ್ ಹೇಳಿದ್ದಾರೆ.
ಉಡುಪಿ ಸುಹಾಸಂ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಸಭಾಂಗಣದಲ್ಲಿ ಶನಿವಾರ ಅದ ಮಾರು ಶ್ರೀಪತಿ ಆಚಾರ್ಯರ ಕಥಾಸಂಕಲನ ‘ಪಾತಾಳನಾಗ ಮತ್ತಿತ್ತರ ಕಥೆಗಳು’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಈ ಪುಸ್ತಕದಲ್ಲಿರುವ ಕತೆಗಳು ಹಿರಿಯ ತಲೆಮಾರಿಗೆ ಸೀಮಿತವಾಗಿದೆ. ಆ ಕಾಲದ ನೆನಪುಗಳು ಮರುಕಳಿಸುವಂತೆ ಮಾಡು ತ್ತದೆ. ಈ ಕತೆಗಳಲ್ಲಿ ಈಗಿನ ಕಾಲದ ಆಸೆ, ಅಹಂಕಾರ ಅಸ್ಮಿತೆಗಳು ಕಾಣುವುದಿಲ್ಲ. ಹಾಗಾಗಿ ಇದು ಈ ಕಾಲದ ಕತೆಗಳೇ ಅಲ್ಲ ಎಂದರು.
ನಮ್ಮ ಆ ಕಾಲದ ಆಸೆಗಳಲ್ಲಿ ಕೆಲವು ನಿರಾಸೆ ಕಂಡರೆ, ಇನ್ನು ಕೆಲವು ಕೊನೆ ಮುಟ್ಟಿರುತ್ತದೆ. ಈಗ ಅವು ಕೇವಲ ನೆನಪು ಗಳು ಮಾತ್ರ. ಆದುದರಿಂದ ಇಂತಹ ಕಥಗಳಿಗೆ ಓದುಗರು ಸಿಗುವುದು ಕಷ್ಟ ಎಂದು ಅವರು ಖೇದ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಕೃತಿ ಪರಿಚಯ ಮಾಡಿದರು. ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ್ ಐತಾಳ್ ವಹಿಸಿದ್ದರು. ಕಾರ್ಯದರ್ಶಿ ಎಚ್.ಗೋಪಾಲ ಭಟ್, ಲೇಖಕ ಅದಮಾರು ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಸಂಧ್ಯಾ ಶೆಣೈ ಸ್ವಾಗತಿಸಿದರು. ನಾರಾಯಣ ಮಡಿ ಕಾರ್ಯಕ್ರಮ ನಿರೂಪಿಸಿದರು.