ಉಡುಪಿ: ಮಾ.27ರಂದು ಕುಗೋಗೆ ವಿಶ್ವ ರಂಗಭೂಮಿ ಸನ್ಮಾನ

ಎಚ್.ಗೋಪಾಲ ಭಟ್ಟ
ಉಡುಪಿ: ರಂಗಭೂಮಿ ಉಡುಪಿ ಇದೇ ಮಾ.27ರಂದು ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಿದ್ದು, ಈ ಸಂದರ್ಭದಲ್ಲಿ ಹಿರಿಯ ಹಾಸ್ಯ ಸಾಹಿತಿಗಳು, ಸಂಘಟಕರು ಹಾಗೂ ರಂಗಭೂಮಿಯ ಕೋಶಾಧಿಕಾರಿಯಾಗಿದ್ದ ಎಚ್.ಗೋಪಾಲ ಭಟ್ಟ (ಕುಗೋ) ಇವರಿಗೆ ವಿಶ್ವ ರಂಗಭೂಮಿ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುವುದು ಎಂದು ರಂಗಭೂಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.27ರ ಗುರುವಾರ ಸಂಜೆ 5:00ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮ ಗಳು ಪ್ರಾರಂಭಗೊಳ್ಳಲಿದ್ದು, ರಂಗಭೂಮಿಯ ಶಾಲಾ ರಂಗಶಿಕ್ಷಣ ಅಭಿಯಾನದಲ್ಲಿ ಸಿದ್ಧಗೊಂಡ ಶಾರದಾ ರೆಸಿಡೆನ್ಸಿಯಲ್ ಶಾಲಾ ವಿದ್ಯಾರ್ಥಿಗಳ ನಾಟಕ ‘ಝುಂ ಝುಂ ಆನೆ ಮತ್ತು ಪುಟ್ಟಿ’ ನಾಟಕ ಹಿರಿಯ ನಿರ್ದೇಶಕ ಬಾಸುಮ ಕೊಡಗು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಸಂಜೆ 6:00ಗಂಟೆಗೆ ಸಭಾ ಕಾರ್ಯಕ್ರಮವನ್ನು ಮಾಹೆಯ ಪ್ರೊ ಚಾನ್ಸಲರ್ ಹಾಗೂ ರಂಗಭೂಮಿಯ ಗೌರವಾಧ್ಯಕ್ಷರಾದ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸುವರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿರುವರು.
ವಿಶ್ವರಂಗಭೂಮಿ ದಿನದಂದು ರಂಗಭೂಮಿ ಉಡುಪಿ ನೀಡುತ್ತಾ ಬಂದಿರುವ ಪ್ರಶಸ್ತಿಗೆ ಕುಗೋ ಆಯ್ಕೆಯಾಗಿದ್ದು, ಅವರನ್ನು ವಿಶ್ವ ರಂಗಭೂಮಿ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು ಎಂದರು.
ಮಹೇಶ್ ನಾಟಕಕ್ಕೆ ಅಂಬಾತನಯ ಪ್ರಶಸ್ತಿ: ರಂಗಭೂಮಿ ಸಂಸ್ಥೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದೊಂದಿಗೆ ಕಳೆದ ವರ್ಷದಿಂದ ನೀಡುತ್ತಿರುವ ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ’ಗೆ ಬೆಂಗಳೂರಿನ ನಾಟಕಕಾರ ಹಾಗೂ ಸಂಘಟಕ ಎನ್.ಸಿ.ಮಹೇಶ್ ಅವರ ಕನ್ನಡ ನಾಟಕ ‘ಸಾಕು ತಂದೆ ರೂಮಿ’ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನವೂ ನಡೆಯಲಿದೆ ಎಂದು ರಂಗಭೂಮಿ ಕಾರ್ಯದಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.
2022-23ನೇ ಸಾಲಿನಲ್ಲಿ ಪ್ರಕಟವಾದ ಸ್ವರಚಿತ ಕನ್ನಡ ನಾಟಕ ಕೃತಿಗೆ ಈ ಪ್ರಶಸ್ತಿ ನೀಡುತಿದ್ದು, ಕೃತಿಕಾರ ಎನ್.ಸಿ.ಮಹೇಶ್ ಅವರಿಗೆ 15,000ರೂ. ನಗದು ಹಾಗೂ ಫಲಕವನ್ನು ಒಳಗೊಂಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಪ್ರಜ್ಞಾನಂ ಟ್ರಸ್ಟ್‌ನ ವಿದುಷಿ ಸಂಸ್ಕೃತಿ ಪ್ರಭಾಕರ್ ಇವರು ನೃತ್ಯ ಸಂಯೋಜಿಸಿ ನಟಿಸಿರುವ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ. ಸುಧಾ ಅಡಕಳ ಅವರ ರಂಗ ಪಠ್ಯವನ್ನು ರಂಗವಿನ್ಯಾಸಗೊಳಿಸಿ ಸಂಗೀತದೊಂದಿಗೆ ನಾಟಕವನ್ನು ಗಣೇಶ ರಾವ್ ಎಲ್ಲೂರು ನಿರ್ದೇಶಿಸಿದ್ದಾರೆ ಎಂದರು.
ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಕಾರದೊಂದಿಗೆ ರಂಗಭೂಮಿ ಉಡುಪಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ರಾಜಗೋಪಾಲ ಬಲ್ಲಾಳ್, ಕೋಶಾಧಿಕಾರಿ ಭೋಜ ಯು. ಹಾಗೂ ಪುಸ್ತಕ ಪ್ರಶಸ್ತಿ ಸಮಿತಿಯ ಸಹ ಸಂಚಾಲಕರಾದ ಡಾ.ವಿಷ್ಣು ಮೂರ್ತಿ ಪ್ರಭು ಉಪಸ್ಥಿತರಿದ್ದರು.