ಕಾಗೇರಿಗೆ ಹಿಂದುಳಿದ ವರ್ಗದ ಮತ ಬೇಡವೇ? | ʼಬ್ರಾಹ್ಮಣರ ಮತವಷ್ಟೇ ಸಾಕುʼ ಎನ್ನುವ ಹಾಡು ವೈರಲ್...!
ಕಾರವಾರ : ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಗೊಂದಲವೊಂದು ಸೃಷ್ಟಿಯಾಗಿದೆ. ಈ ಬಾರಿ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಿ ಬ್ರಾಹ್ಮಣ ಅಭ್ಯರ್ಥಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತ ನೀಡಬೇಕು ಎಂದು ಹೇಳುವ ಶಾಸ್ತ್ರೀಯ ಸಂಗೀತ ಧಾಟಿಯ ಹಾಡೊಂದು ಶಿರಸಿ ಭಾಗದಲ್ಲಿ ವೈರಲ್ ಆಗಿದ್ದು, ಹಾಲಿ ಸಂಸದ ಅನಂತ ಕುಮಾರ್ ಹಗಡೆ ಬೆಂಬಲಿಗರಿಂದ ಟೀಕೆಗೆ ಗುರಿಯಾಗಿದೆ. ಮೊದಲೇ ʻಬ್ರಾಹ್ಮಣ ಪಕ್ಷಪಾತಿʼ ಎಂಬ ಹಣೆಪಟ್ಟಿಗೆ ಗುರಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಈ ವಿದ್ಯಮಾನವು ಮತ್ತಷ್ಟು ಹಿನ್ನೆಡೆಯುಂಟು ಮಾಡಿದೆ ಎನ್ನಲಾಗಿದೆ.
ಮಹಿಳೆಯೊಬ್ಬರು ಹಾಡಿರುವ 3.52 ನಿಮಿಷದ ಶಾಸ್ತ್ರೀಯ ಧಾಟಿಯ ಹಾಡನ್ನು ಈಗಾಗಲೇ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲಿಗರು ಉತ್ತರ ಕನ್ನಡದ ನೂರಾರು ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಮಾಡಿದ್ದಾರೆ. ʻʻಯೋಚಿಸಿ ಮತ ಹಾಕಾವು ಬ್ರಾಹ್ಮಣರೆಲ್ಲ ಬಿಜೆಪಿ ಆಷ್ಟಾರಾವುʼʼ ಎಂದು ಆರಂಭವಾಗುವ ಗೀತೆ, ಬ್ರಾಹ್ಮಣ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಬಹುಮತದಿಂದ ಗೆಲ್ಲಿಸೋಣ ಎಂದು ಹೇಳುತ್ತದೆ. ಈ ಗೀತೆ ವೈರಲ್ ಆಗುತ್ತಿದ್ದಂತೆ, ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಬೆಂಬಲಿಗರು ಸಿಟ್ಟಿಗೆದ್ದಿದ್ದು, ನಿಮಗೆ ಹಿಂದುಳಿದ ವರ್ಗದವರ ಮತಗಳು ಬೇಡವೇ ಎಂದು ಬಹಿರಂಗವಾಗಿಯೇ ಪ್ರಶ್ನೆಯತ್ತಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ಬ್ರಾಹ್ಮಣ ಸಮುದಾಯದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಿಂದುಳಿದ ವರ್ಗದ ಮರಾಠಾ ಸಮುದಾಯದ ಡಾ. ಅಂಜಲಿ ನಿಂಬಾಳ್ಕರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಇದುವರೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ ಮಾತ್ರವಲ್ಲ, ಅಭ್ಯರ್ಥಿ ಪರವಾಗಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಹೆಗಡೆ ಬೆಂಬಲಿಗರಲ್ಲಿ ಒಂದು ಗುಂಪು ಡಾ.ಅಂಜಲಿ ಅವರ ಪರವಾಗಿ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಗುಂಪು ಈ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಿದೆ. ಬ್ರಾಹ್ಮಣರು ಮಾತ್ರ ಮತ ಹಾಕಿದರೆ ಕಾಗೇರಿಯವರು ಗ್ರಾಮ ಪಂಚಾಯತ್ ಮೇಂಬರ್ ಕೂಡ ಆಗಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಗೇರಿ ವಿರುದ್ಧ ಬಹುದೊಡ್ಡ ವಿರೋಧವೇ ನಡೆದಿದೆ ಎಂದು ತಿಳಿದು ಬಂದಿದೆ.