ತುಂಗಭದ್ರಾ ಜಲಾಶಯದಿಂದ 8 ಟಿಎಂಸಿ ನೀರು ಖಾಲಿ

Update: 2024-08-12 05:55 GMT

ತುಂಗಭದ್ರಾ ಅಣೆಕಟ್ಟು (source: PTI)

ವಿಜಯನಗರ, ಆ.12: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಜಲಾಶಯದ ನೀರನ್ನು ಅರ್ಧದಷ್ಟು ಬರಿದು ಮಾಡುವ ಕಾರ್ಯ ಭರದಿಂದ ಸಾಗಿದೆ. ಸದ್ಯ 8 ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗಿದೆ.

ಈ ನಡುವೆ ಶಾಶ್ವತ ಹೊಸ ಕ್ರಸ್ಟ್ಗೇಟ್ ಗೇಟ್ ಅಳವಡಿಸಲು ಬಹಳಷ್ಟು ಸಮಯ ಹಿಡಿಯುವುದರಿಂದ ಸದ್ಯ ‘ಸ್ಟಾಪ್ ಲಾಗ್ ಗೇಟ್’ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಗೇಟ್ ಅಳವಡಿಕೆಗೆ ಜಲಾಶಯದ ಬಹುತೇಕ ಅರ್ಧದಷ್ಟು ನೀರು ಖಾಲಿ ಮಾಡಬೇಕಿದೆ. ಜಲಾಶಯದ ನೀರನ್ನು ಹಿಡಿದಿಟ್ಟುಕೊಳ್ಳಲು ಆದ್ಯತೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ‘ಸ್ಟಾಪ್ ಲಾಗ್ ಗೇಟ್’ ಬಳಸಿ 19ನೇ ಗೇಟ್ ಅನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

8 ಟಿಎಂಸಿ ನೀರು ಖಾಲಿ: ಸದ್ಯ ಅಣೆಕಟ್ಟೆಯಿಂದ ನದಿಗೆ ಸರಾಸರಿ 1 ಲಕ್ಷ ಕ್ಯುಸೆಕ್ ನಷ್ಟು ನೀರನ್ನು ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣ 25 ಸಾವಿರ ಕ್ಯುಸೆಕ್ನಷ್ಟು ಮಾತ್ರ ಇದೆ. ಹೀಗಾಗಿ ಒಂದೇ ದಿನದಲ್ಲಿ ಜಲಾಶಯದಿಂದ 8 ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗಿದೆ. ಶನಿವಾರ ರಾತ್ರಿ ಜಲಾಶಯದಲ್ಲಿ ಗರಿಷ್ಠ ಸಂಗ್ರಹ ಸಾಮರ್ಥ್ಯವಾದ 105.78 ಟಿಎಂಸಿ ಅಡಿ ನೀರಿತ್ತು. ಸೋಮವಾರ ಈ ಸಂಗ್ರಹ 97.75 ಟಿಎಂಸಿ ಅಡಿಗೆ ಕುಸಿದಿದೆ. ಸೋಮವಾರದಿಂದ 1.50 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುವುದು ಎಂದು ಮಂಡಳಿ ರವಿವಾರ ರಾತ್ರಿಯೇ ಎಚ್ಚರಿಕೆ ನೀಡಿದೆ.

ಇಂದು ವಿಪಕ್ಷ ನಿಯೋಗ ಭೇಟಿ

ಈ ಮಧ್ಯೆ ಇಂದು ತುಂಗಭದ್ರಾ ಅಣೆಕಟ್ಟಕ್ಕೆ ಇಂದು ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಇಂದು ಮಧ್ಯಾಹ್ನ 12:30ಕ್ಕೆ ಡ್ಯಾಂಗೆ ಆಗಮಿಸಿ, ಪರಿಶೀಲನೆ ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News