ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ; ಒಂದೆರಡು ಗ್ಯಾರಂಟಿ ನಿಲ್ಲಿಸಿ ಎಂದ ಕಾಂಗ್ರೆಸ್ ಶಾಸಕ ಗವಿಯಪ್ಪ
ಹೊಸಪೇಟೆ : "ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರಕ್ಕೆ ಬರುತ್ತಿದ್ದ ಅನುದಾನ ಕಡಿಮೆಯಾಗಿದ್ದು, ಒಂದೆರಡು ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡುತ್ತೇನೆ" ಎಂದು ಕಾಂಗ್ರೆಸ್ ಶಾಸಕ ಗವಿಯಪ್ಪ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಕೆಲವು ಶಾಸಕರು ಗ್ಯಾರಂಟಿ ನಿಲ್ಲಿಸಬೇಕು ಎಂದು ಈ ಹಿಂದೆಯೇ ಹೇಳಿದ್ದರು, ಗ್ಯಾರಂಟಿಗಳಿಂದ ನಮಗೆ ಅನುದಾನ ಸಿಗುತ್ತಿಲ್ಲ, ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಈಗ ಮತ್ತೆ ಕಾಂಗ್ರೆಸ್ ಹಿರಿಯ ಶಾಸಕ ಗವಿಯಪ್ಪ ಒಂದೆರಡು ಗ್ಯಾರಂಟಿಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೊಸಪೇಟೆಯ ಇಪ್ಪಿತೇರಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜ್ಯ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿಗಳಿಂದ ಕ್ಷೇತ್ರಕ್ಕೆ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರೆಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ" ಎಂದು ಹೇಳಿದ್ದಾರೆ.
ವಿವಾದದ ಬಳಿಕ ಸ್ಪಷ್ಟನೆ :
ತಮ್ಮ ಹೇಳಿಕೆಯು ವಿಪಕ್ಷಗಳ ಬಾಯಿಗೆ ಆಹಾರವಾಗುತ್ತಿದ್ದಂತೆ ಈ ಸಂಬಂಧ ಸ್ಪಷ್ಟನೆ ನೀಡಿದ ಗವಿಯಪ್ಪ ಅವರು, "ನಾನು ಯಾವುದೇ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಹೇಳಿದ್ದಾರೆ.
"ಗ್ಯಾರಂಟಿಯಿಂದ ಎಲ್ಲರಿಗೂ ಲಾಭ ಆಗುತ್ತಿದೆ ಎಂದು ಹೇಳಿದ್ದೇನೆ. ಗ್ಯಾರಂಟಿ ಯೋಜನೆಗಳಿಂದಲೇ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ನಮ್ಮ ಸರಕಾರ ಇರುವವರೆಗೂ ಗ್ಯಾರಂಟಿ ಯೋಜನೆ ಇರುತ್ತದೆ. ನಮಗೆ ಯಾವುದೇ ಅನುದಾನ ಕೊರತೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದರು.