ಕುಂ.ವೀರಭದ್ರಪ್ಪ, ನ್ಯಾ.ಶಿವರಾಜ್ ಪಾಟೀಲ್, ವೆಂಕಟೇಶ್ ಕುಮಾರ್‌ಗೆ ʼನಾಡೋಜ ಗೌರವʼ
Update: 2025-04-03 19:53 IST
ವಿಜಯನಗರ : ಸಾಹಿತಿ ಕುಂ.ವೀರಭದ್ರಪ್ಪ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಮತ್ತು ಹಿಂದೂಸ್ತಾನಿ ಗಾಯಕ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ‘ನಾಡೋಜ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು, ವಿಶ್ವವಿದ್ಯಾಲಯದ ಘಟಿಕೋತ್ಸವ ಶುಕ್ರವಾರ ಸಂಜೆ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ಪ್ರದಾನ ಮಾಡುವರು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎ.ಎಚ್. ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಡಿ.ಲಿಟ್ ಮತ್ತು ಪಿಎಚ್.ಡಿ. ಪದವಿ ಪ್ರದಾನ ಮಾಡುವರು ಎಂದು ಮಾಹಿತಿ ನೀಡಿದರು.