ವಿಜಯನಗರ | ಆರಕ್ಷಕರ ಸೇವೆ, ಶೌರ್ಯ ಅರ್ಪಣಾ ಮನೋಭಾವದ ಸಂಕೇತ : ಎಸ್ಪಿ ಶ್ರೀಹರಿಬಾಬು

ವಿಜಯನಗರ(ಹೊಸಪೇಟೆ) : ದೇಶದಲ್ಲಿ ಶಾಂತಿ ನೆಮ್ಮದಿ ಇದ್ದರೆ ಅದು ಪೊಲೀಸರಿಂದ ಮಾತ್ರ ಸಾಧ್ಯ ಮತ್ತು ಪೊಲೀಸರ ಸೇವೆ, ಶೌರ್ಯ ಹಾಗೂ ಅರ್ಪಣಾ ಮನೋಭಾವದ ಸಂಕೇತವಾಗಿದೆ ಎಂದು ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು.ಬಿ.ಎಲ್. ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದ ಅವರು, ಪೊಲೀಸ್ ಧ್ವಜ ವಿತರಣೆಯಿಂದ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಪೊಲೀಸ್ ಅಧಿಕಾರಿಗಳ ಮತ್ತು ಪೊಲೀಸ್ ಸಿಬ್ಬಂದಿಯವರ ಸೇವೆ, ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ದಿನವಾಗಿದೆ ಎಂದರು.
1984ಕ್ಕಿಂತ ಮೊದಲು ನ.2ನೇ ದಿನ ಪೊಲೀಸ್ ಕಲ್ಯಾಣ ದಿನವೆಂದು ಹಾಗೂ ಎ.2ನೇ ದಿನವನ್ನು ಪೊಲೀಸ್ ಧ್ವಜ ದಿನಾಚರಣೆ ಎಂದು ಆಚರಿಸಲಾಗುತ್ತಿತ್ತು. 1984ರಿಂದ ಈ ಧ್ವಜ ದಿನಚಾರಣೆ ಹಾಗೂ ಕಲ್ಯಾಣ ದಿನವನ್ನು ಒಗ್ಗೂಡಿಸಿ ಎ.2ರಂದು ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಮತ್ತು ಪೊಲೀಸ್ ಕಲ್ಯಾಣ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತ ಪಿಎಸ್‌ಐಗಳಾದ ಎಂ.ಮುನಿರತ್ನ, ಕೆ.ಮಲಿಕ್ ಸಾಹೇಬ್ ಮಾತನಾಡಿದರು.
ಧ್ವಜ ವಂದನೆ ಬಳಿಕ ಅಕರ್ಷಕ ಪಥ ಸಂಚಲನ ನಡೆಸಲಾಯಿತು. ಪಥ ಸಂಚಲನದಲ್ಲಿ ಆರ್‌ಪಿಐ ಪರೇಡ್ ಕಮಾಂಡರ್ ಗೋವಿಂದ ಎ., ಆರ್‌ಎಸ್‌ಐ ಸಹಾಯಕ ಕಮಾಂಡರ್ ಮಂಜುನಾಥ ದಳವಾಯಿ, ಕಮಲಾಪುರ ಪಿಎಸ್‌ಐ ಸಂತೋಷ, ಹಗರಿಬೊಮ್ಮನಹಳ್ಳಿ ಪಿಎಸ್‌ಐ ಬಸವರಾಜ್ ಅಡವಿಭಾವಿ, ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಶಿಂಧೆ, ಹೀರೆಹಡಗಲಿ ಪಿಎಸ್‌ಐ ಭರತ ಸಿ.ಬಿ., ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆರ್‌ಎಸ್‌ಐ ಲಾಳೆಮಶಾಕ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್‌ಐ ಯು.ರವಿಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಲೀಮ್ ಪಾಷಾ, ಸೇರಿದಂತೆ ನಿವೃತ್ತ ಮಾಜಿ ಸೈನಿಕರು ಉಪಸ್ಥಿತರಿದ್ದರು.