ಜ್ಞಾನ ನೀಡುವ ಗುರು ಜೀವನದ ಮಾರ್ಗದರ್ಶಿ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2025-04-04 23:11 IST
ಜ್ಞಾನ ನೀಡುವ ಗುರು ಜೀವನದ ಮಾರ್ಗದರ್ಶಿ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
  • whatsapp icon

ಹೊಸಪೇಟೆ(ವಿಜಯನಗರ) : ಅಭಿವೃದ್ದಿ ಹೊಂದಿದ ದೇಶಗಳು ಶಿಕ್ಷಣವನ್ನು ಮಾತೃಭಾಷೆ ಹಾಗೂ ಪ್ರಾದೇಶಿಕ ಮಾಧ್ಯಮದಲ್ಲಿ ನೀಡುತ್ತಿದ್ದು, ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿಯಲ್ಲಿ ಇದಕ್ಕೆ ಆದ್ಯತೆ ನೀಡಿದೆ ಎಂದು ಸರ್ಕಾರ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಅವರು ಶುಕ್ರವಾರ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲುರಂಗಮಂದಿರದಲ್ಲಿ ಏರ್ಪಡಿಸಿದ್ದ ವಿವಿಯ 33ನೇ ನುಡಿಹಬ್ಬ, ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಬ್ಬ ಶಿಕ್ಷಕನು ಜ್ಞಾನವನ್ನು ಕೊಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ನಿಜವಾದ ಮಾರ್ಗದರ್ಶಕನಾಗಿರುತ್ತಾನೆ. ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಘಟಿಕೋತ್ಸವ ವಿದ್ಯಾರ್ಥಿ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಇಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯ, ಪ್ರಸ್ತುತ ಕಾಲದ ಸವಾಲುಗಳನ್ನು ಎದುರಿಸಲು ಮತ್ತು ಉದಯೋನ್ಮುಖ ಅವಕಾಶಗಳ ಲಾಭವನ್ನು ಪಡೆಯಲು ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ನಿಗಧಿಪಡಿಸಲಾಗಿದೆ. ರಾಷ್ಟ್ರೀಯ ಅಭಿವೃದ್ಧಿಗೆ ನಾಯಕತ್ವವನ್ನು ನೀಡುವುದು ನಿಮ್ಮೆಲ್ಲರ ಕರ್ತವ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ವಿದ್ಯಾರ್ಥಿಗಳು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಹಂಪಿ ವೈಭವದ ಇತಿಹಾಸ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಪ್ರಸಿದ್ಧವಾಗಿದೆ. ಈ ಐತಿಹಾಸಿಕ ನೆಲದಲ್ಲಿ ನೆಲೆಗೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಮ್ಮ ಶ್ರೀಮಂತ ಸಂಪ್ರದಾಯಗಳು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯ ಸಂಯೋಜಿಸುತ್ತಿದೆ. ಈ ವಿಶ್ವವಿದ್ಯಾಲಯವು ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸವನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವಲ್ಲಿ ಮತ್ತು ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ಸುಮಾರು 5,000 ಅಪರೂಪದ ಹಸ್ತಪ್ರತಿಗಳ ಸಂಗ್ರಹವಿರುವುದು ಹೆಮ್ಮೆಯ ಸಂಗತಿ. ದೃಶ್ಯಕಲಾ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಚಿಸಿ, ಪ್ರದರ್ಶಿಸಿದ ಕಲಾಕೃತಿಗಳು ಆಕರ್ಷಕವಾಗಿವೆ ಎಂದು ಶ್ಲಾಘಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ 34 ವರ್ಷಗಳ ಹಿಂದೆ ಹುಟ್ಟು ಹಾಕಲಾದ ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು-ನುಡಿ, ನೆಲ-ಜಲ, ಇತಿಹಾಸ ಪರಂಪರೆ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ವಿವಿಯ ಅವಿರತ ಪ್ರಯತ್ನದಿಂದಾಗಿ ಇಂದಿನ ಘಟಿಕೋತ್ಸವದಲ್ಲಿ 198 ಜನ ವಿದ್ಯಾರ್ಥಿಗಳು ಸ್ನಾತಕ ಪದವಿ, ಪಿಎಚ್ಡಿ ಸ್ವೀಕರಿಸುತ್ತಿರುವುದು ನಿದರ್ಶನವಾಗಿದೆ ಎಂದರು.

ರಾಜ್ಯದ ಎಲ್ಲಾ ವಿವಿಗಳಲ್ಲಿ ಅಂದಾಜು 2,800 ಭೋದಕ ಹುದ್ದೆ ಸೇರಿ ಹೊಸ ಕೋರ್ಸ್‍ಗಳ ಹುದ್ದೆಗಳು ಸೇರಿ ಒಟ್ಟಾರೆಯಾಗಿ 3,500 ಭೋದಕ ಹುದ್ದೆಗಳನ್ನು ತುಂಬುವ ಅಗತ್ಯವಿದೆ. ಶೀಘ್ರವೇ ಅತ್ಯಗತ್ಯವಿರುವ ಭೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಶೀಘ್ರ ಕ್ರಮವಹಿಸುವ ಭರವಸೆ ನೀಡಿದರು.

ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ಮಾತನಾಡಿದರು.

ಈ ಸಂದರ್ಭದಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಸ್ವಾಗತಿಸಿದರು. ಕುಲಸಚಿವ ಡಾ.ವಿಜಯ್ ಪೂಣಚ್ಛ ತಂಬಂಡ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News