ಬಿಎಸ್‌ವೈ ಪೊಕ್ಸೊ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆಯೂ ಇಲ್ಲ, ಜಾಮೀನೂ ಇಲ್ಲ !
ಪೊಕ್ಸೊ ಕೇಸ್ ನಲ್ಲಿ ಬಿ.ಎಸ್.ಯಡಿಯೂರಪ್ಪಗೆ ಬಿಗ್ ರಿಲೀಫ್ ಎಂದು ಮಾಧ್ಯಮಗಳು ಬ್ರೇಕಿಂಗ್ ಸುದ್ದಿ ಹಾಕಿವೆ. ವಾಸ್ತವವಾಗಿ ಹೈಕೋರ್ಟ್ ಬಿ.ಎಸ್.ಯಡಿಯೂರಪ್ಪಗೆ ಯಾವ ರಿಲೀಫ್ ಅನ್ನೂ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಕೃತ್ಯ ನಡೆಸಿರುವುದು ಸಾಭೀತಾಗಿರುವುದರಿಂದ ತನಿಖೆಗೆ ತಡೆ ನೀಡುವುದಾಗಲೀ, ಜಾಮೀನು ನೀಡುವುದಾಗಲೀ ಮಾಡಬಾರದು ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಮತ್ತು ಸಂತ್ರಸ್ತೆಯ ಪರ ವಕೀಲ ಎಸ್.ಬಾಲನ್ ಮಾಡಿದ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ. ಯಡಿಯೂರಪ್ಪ ವಿರುದ್ದದ ಪೊಕ್ಸೊ ಕೇಸ್ ತನಿಖೆ ಸರಾಗವಾಗಿ ನಡೆಯಲಿದೆ.
ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್ ಮುಂದೆ ಎರಡು ಅರ್ಜಿ ಸಲ್ಲಿಸಿದ್ದರು. ಸಿ ಆರ್ ಎಲ್ ಪಿ 5529/2024 ರಲ್ಲಿ ಮಧ್ಯಂತರ ಜಾಮೀನನ್ನೂ ರಿಟ್ ಪಿಟಿಷನ್ ನಂ. 15522/2024 ನಲ್ಲಿ ಕೇಸ್ ರದ್ದತಿಯ ಜೊತೆಗೆ ವಿಚಾರಣೆ ಮುಗಿಯುವವರೆಗೆ ತಡೆಯಾಜ್ಞೆಯನ್ನು ನೀಡಬೇಕು ಎಂದು ಕೋರಿದ್ದರು. ಯಡಿಯೂರಪ್ಪ ಈ ಎರಡೂ ಅರ್ಜಿ ಸಲ್ಲಿಸುವ ಮೊದಲೇ ಅಂದರೆ ಜೂನ್ 10 ರಂದು ಸಂತ್ರಸ್ತೆಯ ಪರ ವಕೀಲ ಎಸ್ ಬಾಲನ್ ಅವರು ರಿಟ್ ಪಿಟೀಷನ್ WP FR No. 15283/2024 ಹಾಕಿದ್ದರು. ಆ ರಿಟ್ ಪಿಟಿಷನ್ ನಲ್ಲಿ ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರಿಗೆ ಸೂಚಿಸುವಂತೆ ಮನವಿ ಮಾಡಲಾಗಿತ್ತು. ಬಾಲನ್ ಹಾಕಿದ್ದ ರಿಟ್ ಪಿಟಿಷನ್ ಅರ್ಜಿ ಕೇಸ್ ನಂಬರ್ ಕೂಡಾ ಆಗದೇ, ಕೇವಲ ಫೈಲಿಂಗ್ ನಂಬರ್ ಮಾತ್ರ ಆಗಿತ್ತು. ಎಫ್ಐಅರ್ ದಾಖಲಾಗಿ ಮೂರು ತಿಂಗಳಾದರೂ ಏನೂ ತನಿಖೆ ಮಾಡದೇ ಸುಮ್ಮನಿದ್ದ ಪೊಲೀಸರು, ಬಾಲನ್ ಹಾಕಿದ್ದ ರಿಟ್ ಪಿಟಿಷನ್ ನ ಪರಿಣಾಮಗಳಿಗೆ ಹೆದರಿ ಯಡಿಯೂರಪ್ಪಗೆ ನೋಟಿಸ್ ಜಾರಿ ಮಾಡಿ, ಬಂಧನ ವಾರೆಂಟ್ ತಂದಿದ್ದರು. ಆದರೆ ಬಾಲನ್ ಹಾಕಿದ್ದ ರಿಟ್ ಪಿಟಿಷನ್ ಹೈಕೋರ್ಟ್ ನಲ್ಲಿ ದಾಖಲಾಗಿದ್ದರೂ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿರಲಿಲ್ಲ.
ಶುಕ್ರವಾರ ಹೈಕೋರ್ಟ್ ಹಾಲ್ ನಂಬರ್ 7 ರಲ್ಲಿ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರ ಮುಂದೆ ಮಧ್ಯಾಹ್ನ 2.30 ರ ಲಿಸ್ಟ್ ನಲ್ಲಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ಕೇಸ್ ರದ್ದು ಕೋರಿ ಅರ್ಜಿಗಳು ಅನುಕ್ರಮವಾಗಿ ಕ್ರಮಸಂಖ್ಯೆ 8 ಮತ್ತು 9 ಎಂದು ವಿಚಾರಣೆಗೆ ಬಂದಿದ್ದವು. ಕೋರ್ಟ್ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಮುಂದೆ ಮೆಮೋ ಹಾಕಿದ ಎಸ್ ಬಾಲನ್ ಅವರು "ಬಿ ಎಸ್ ಯಡಿಯೂರಪ್ಪ ಎಂಬ ಆರೋಪಿ ಜಾಮೀನು ಮತ್ತು ಕೇಸ್ ರದ್ದತಿ ಕೋರಿ ಅರ್ಜಿ ಹಾಕಿದ್ದಾರೆ. ಅದು ಲಿಸ್ಟ್ ಆಗಿದೆ. ಕ್ರಮ ಸಂಖ್ಯೆ 8 ಮತ್ತು 9 ರಲ್ಲಿ ಇದೆ. ಆ ಪ್ರಕರಣಕ್ಕೆ ಸಂಬಂಧಿಸಿ ನಾವು ಈ ಮೊದಲೇ ರಿಟ್ ಅರ್ಜಿ ಹಾಕಿದ್ದೇವೆ. ಆದರೆ ಅದು ನ್ಯಾಯಾಲಯದ ಮುಂದೆ ಬಂದಿಲ್ಲ. ಹಾಗಾಗಿ ನಾವು ಹಾಕಿದ ರಿಟ್ ಅರ್ಜಿಯನ್ನೂ ಯಡಿಯೂರಪ್ಪನವರ ಅರ್ಜಿಯ ಜೊತೆಗೇ ವಿಚಾರಣೆ ನಡೆಸಬೇಕು. ಸಂತ್ರಸ್ತೆಯ ಪರವಾಗಿ ನಾನು ವಾದ ಮಂಡಿಸಲು ಅವಕಾಶ ಕೊಡಬೇಕು" ಎಂದು ಕೋರಿದರು. ನ್ಯಾಯಮೂರ್ತಿಗಳು ಎಸ್ ಬಾಲನ್ ಅವರ ಕೋರಿಕೆಯನ್ನು ಪುರಸ್ಕರಿಸಿ, ಬಾಲನ್ ಸಲ್ಲಿಸಿದ ರಿಟ್ ಅರ್ಜಿಯನ್ನು ತರುವಂತೆ ತನ್ನ ಸಿಬ್ಬಂದಿಗಳಿಗೆ ಆದೇಶಿಸಿದರು.
ಬಿ.ಎಸ್.ಯಡಿಯೂರಪ್ಪರ ಜಾಮೀನು ಕೋರಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್, ಪ್ರಾರಂಭದಲ್ಲಿ ನಿಯಮದಂತೆ ಯಡಿಯೂರಪ್ಪ ಪರ ವಕೀಲರಿಗೆ ವಾದ ಮಾಡಲು ಅವಕಾಶ ಕೊಟ್ಟರು. "ದೂರುದಾರ ಮಹಿಳೆಗೆ ಕೇಸ್ ಹಾಕುವ ಚಾಳಿ ಇದೆ. ಈವರೆಗೆ 53 ಪ್ರಕರಣ ದಾಖಲಿಸಿದ್ದಾರೆ" ಎಂದು ವಾದ ಶುರು ಮಾಡಿದರು.
ಇದಕ್ಕೆ ಆಶ್ವರ್ಯ ವ್ಯಕ್ತಪಡಿಸಿದ ಪೀಠ, 'ಯಾರ್ಯಾರ ಮೇಲೆ ಏನೇನು ಕೇಸ್ ದಾಖಲಿಸಿದ್ದಾರೆ?' ಎಂದು ಪ್ರಶ್ನಿಸಿತು. ಬಿಎಸ್ ವೈ ಪರ ವಕೀಲರು ಮಹಿಳೆ ಹಾಕಿದ್ದಾರೆ ಎನ್ನಲಾದ ಪ್ರಕರಣಗಳನ್ನು ಓದಲು ಶುರು ಮಾಡಿದರು.
'ಆ ಮಹಿಳೆ ಏನು ಕೆಲಸ ಮಾಡುತ್ತಿದ್ದಾರೆ?' ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು.
'ಆ ಮಹಿಳೆಗೆ ಕೇಸ್ ಕೊಡುವುದೇ ಕೆಲಸ. ಬ್ಲಾಕ್ ಮೇಲ್ ಮಾಡುವುದೇ ಆದಾಯದ ಮೂಲ' ಎಂದು ಬಿ ಎಸ್ ವೈ ಪರ ವಕೀಲರು ಉತ್ತರಿಸಿದರು.
ತಕ್ಷಣ ಮಧ್ಯ ಪ್ರವೇಶಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ್ ಅವರು "ಸಂತ್ರಸ್ತ ಮಹಿಳೆ 53 ಕೇಸ್ ದಾಖಲಿಸಿದ್ದಾರೆ ಎನ್ನುವುದು ಸುಳ್ಳು. ಕೇವಲ 6 ಪ್ರಕರಣ ದಾಖಲಿಸಿದ್ದಾರೆ. ಈ ಆರು ಪ್ರಕರಣಗಳು ಬಿಎಸ್ ಯಡಿಯೂರಪ್ಪರಿಗೆ ಸಂಬಂಧಿಸಿದ್ದಲ್ಲ. ಅವು ಪ್ರತ್ಯೇಕ ಪ್ರಕರಣಗಳು. ಆ ಪೈಕಿ ಒಂದು ಕೌಟುಂಬಿಕ ದೌರ್ಜನ್ಯ ಪ್ರಕರಣ. ಉಳಿದವು ಉದ್ಯಮಕ್ಕೆ ಸಂಬಂಧಿಸಿದ ಪ್ರಕರಣ. ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡುವುದೇ ಉದ್ಯೋಗ ಎನ್ನುವುದು ಸರಿಯಲ್ಲ. ಆಕೆ ಉದ್ಯಮಿಯಾಗಿದ್ದಾಳೆ" ಎಂದು ವಾದ ಮಂಡಿಸಿದರು.
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ್ ಮತ್ತು ವಕೀಲ ಎಸ್ ಬಾಲನ್ ಅವರು ಅಭೂತಪೂರ್ವವಾಗಿ ವಾದ ಮಂಡಿಸಿದರು. ಇಷ್ಟಾದರೂ, ವಿಪರ್ಯಾಸ ಎಂದರೆ ಸುಮಾರು ಒಂದು ಗಂಟೆಗಳ ಕಾಲ ಸಂತ್ರಸ್ತ ಮಹಿಳೆಯ ನಡತೆ, ಉದ್ಯೋಗದ ಬಗ್ಗೆಯೇ ಚರ್ಚೆ ನಡೆಯಿತು. ಎಲ್ಲೂ ಕೂಡ ಆರೋಪಿ ಬಿ.ಎಸ್.ಯಡಿಯೂರಪ್ಪರ ಹೀನ ನಡತೆ, ಮಗುವಿಗೂ ಲೈಂಗಿಕವಾಗಿ ಪೀಡಿಸಿದ ಅನೈತಿಕತೆಯ ಬಗ್ಗೆ ಚರ್ಚೆ ನಡೆಸಿಲ್ಲ. ಕಿಕ್ಕಿರಿದ ಕೋರ್ಟ್ ನಲ್ಲಿ ಸಂತ್ರಸ್ತೆಯ ನಡತೆಯ ಬಗ್ಗೆ ವಿಚಾರಣೆ ನಡೆದರೆ, ಆರೋಪಿಯ ರಕ್ಷಣೆಗೆ ಇರುವ ಕಾನೂನು ಅವಕಾಶಗಳ ಬಗ್ಗೆ ಮಾತ್ರ ಚರ್ಚೆ ನಡೆಯಿತು. ಇದು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಅಣಕದಂತೆ ಕಂಡು ಬಂತು.
"ಆರೋಪಿ ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿಲ್ಲ. ಪೊಲೀಸರು ನೋಟಿಸ್ ನೀಡಿದ ಬಳಿಕ ನನಗೆ ಪಕ್ಷದ ಕೆಲಸ ಇದೆ ಎಂದು ದಿಲ್ಲಿ ವಿಮಾನ ಟಿಕೆಟ್ ಖರೀದಿಸಿದ್ದಾರೆ. ಅವರಿಗೆ ಯಾವ ಪೂರ್ವನಿಯೋಜಿತವಾಗಿ ದಿಲ್ಲಿಯಲ್ಲಿ ಕೆಲಸ ಇರಲಿಲ್ಲ. ವಿಚಾರಣೆ ತಪ್ಪಿಸಿಕೊಳ್ಳಲೆಂದೇ ದಿಲ್ಲಿಗೆ ಹೋಗಿದ್ದಾರೆ. ಸಂತ್ರಸ್ತೆಯ ಮೇಲೆ ಒತ್ತಡ ಹೇರಿದ್ದಲ್ಲದೇ, ಸಾಕ್ಷ್ಯ ನಾಶ ಮಾಡಿದ್ದಾರೆ" ಎಂದು ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ್ ವಾದ ಮಂಡಿಸಿದರು.
"ಈಗಾಗಲೇ ಎಫ್ಎಸ್ಎಲ್ ರಿಪೋರ್ಟ್ ಬಂದಿದೆ. ಹಾಗಾಗಿ ಆರೋಪಿ ಬಿ ಎಸ್ ವೈ ವಿಚಾರಣೆ ನಡೆಸಬೇಕು. ವಿಚಾರಣೆಗೆ ಹಾಜರಾಗದೆ ದಿಲ್ಲಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ದಿಲ್ಲಿಗೆ ಹೋಗಿ ಬಂಧಿಸಬೇಕಾದರೆ ನಮ್ಮ ಬಳಿ ವಾರೆಂಟ್ ಇರಬೇಕು. ಇಲ್ಲದೇ ಇದ್ದರೆ ದಿಲ್ಲಿ ಪೊಲೀಸರು ಸಹಕರಿಸಲ್ಲ. ಹಾಗಾಗಿ ವಾರೆಂಟ್ ಪಡೆದುಕೊಂಡೆವು" ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿದರು.
ಬಿ.ಎಸ್.ಯಡಿಯೂರಪ್ಪ ಪರ ವಕೀಲರು ವಾದಿಸುತ್ತಾ "ಮೊನ್ನೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಬಿಜೆಪಿ ಮಾಡಿತ್ತು. ಅದಕ್ಕೆ ಪ್ರತಿಕಾರವಾಗಿ ಬಿ.ಎಸ್.ಯಡಿಯೂರಪ್ಪರನ್ನು ಜೈಲಿಗೆ ಹಾಕಲು ತಂತ್ರ ಮಾಡಿದ್ದಾರೆ" ಎಂದರು. ತಕ್ಷಣ ಎದ್ದು ನಿಂತ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ್ ಮತ್ತು ಸಂತ್ರಸ್ತೆಯ ಪರ ವಕೀಲ ಎಸ್ ಬಾಲನ್ ಆಕ್ಷೇಪ ವ್ಯಕ್ತಪಡಿಸಿ "ರಾಜಕೀಯ ಮಾತನಾಡದೇ ಪ್ರಕರಣದ ಬಗ್ಗೆ ಮಾತನಾಡುವಂತೆ ಸೂಚಿಸಿ" ಎಂದರು.
ಆ ಬಳಿಕ ಸಂತ್ರಸ್ತೆಯ ಪರ ವಾದ ಮಾಡಿದ ಎಸ್ ಬಾಲನ್ ಬಾಲಕಿಯ 164 ಹೇಳಿಕೆಯನ್ನು ಓದಲು ಶುರು ಮಾಡಿದರು. ಬಾಲನ್ ಓದುತ್ತಿರುವ ಹೇಳಿಕೆಯನ್ನು ನ್ಯಾಯಮೂರ್ತಿಗಳು ಓದಲು ಫೈಲ್ ಕೈಗೆತ್ತಿಕೊಂಡಾಗ ಬಾಲನ್ ಮಂಡಿಸಿದ್ದ ರಿಟ್ ಅಲ್ಲಿ ಇರಲೇ ಇಲ್ಲ. ಕೋರ್ಟ್ ಆರಂಭಗೊಂಡಾಗಲೇ ಬಾಲನ್ ಮಂಡಿಸಿದ್ದ ರಿಟ್ ಅರ್ಜಿಯನ್ನು ಯಡಿಯೂರಪ್ಪ ಅರ್ಜಿ ಜೊತೆ ವಿಲೀನ ಮಾಡಿ ಆದೇಶ ಹೊರಡಿಸಿದ್ದರು. ಆದರೂ ಯಡಿಯೂರಪ್ಪ ವಿರುದ್ದದ ರಿಟ್ ಕಡತ ನ್ಯಾಯಮೂರ್ತಿಗಳ ಮುಂದೆ ಬಂದಿಲ್ಲ. ಇದರಿಂದ ಕೆಂಡಾಮಂಡಲರಾದ ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರು "ಬಾಲನ್ ಮಂಡಿಸಿದ ರಿಟ್ ಅರ್ಜಿ ಇನ್ನು ಐದು ನಿಮಿಷದಲ್ಲಿ ನನ್ನ ಮುಂದೆ ಇರಬೇಕು. ಇಲ್ಲದಿದ್ದರೆ ಅದಕ್ಕೆ ಸಂಬಂಧಿಸಿದ ಸಿಬ್ಬಂದಿಯನ್ನು ಅಮಾನತು ಮಾಡುತ್ತೇನೆ. ಹೀಗಾದರೆ ವಕೀಲರು ಕೆಲಸ ಮಾಡುವುದು ಹೇಗೆ ?" ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಾಗಿ ಕ್ಷಣಾರ್ಧದಲ್ಲಿ ಕಡತ ಬಂತು. ಬಾಲನ್ ವಾದ ಮುಂದುವರೆಸಿದರು.
"ನಾನು ಸಂತ್ರಸ್ತ ಮಹಿಳೆಯ ಪರ ವಕಾಲತ್ತು ಹಾಕಿದ್ದೇನೆ. ಮಹಿಳೆ ಸಾಯುವ 24 ಗಂಟೆ ಮೊದಲು ನನ್ನನ್ನು ಸಂಪರ್ಕಿಸಿದ್ದರು. ಆದರೆ ಆ ಮೇಲೆ ದಿಢೀರ್ ಸಾವನ್ನಪ್ಪಿದ್ದಾರೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ಇದೆ. ಹಾಗಾಗಿ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದೇವೆ. ಮಹಿಳೆ ತನಗೆ ನ್ಯಾಯ ಸಿಗಲ್ಲ ಎಂದು ಜರ್ಜರಿತಳಾಗಿದ್ದರು. ಆಕೆ ಸಾವನ್ನಪ್ಪಿದ ಬಳಿಕ ಆಕೆಯ ಪುತ್ರ ನನಗೆ ವಕಾಲತ್ತು ನೀಡಿದ್ದಾನೆ. ಪುತ್ರ ಮತ್ತು ತಾಯಿ ಹಲವು ಪ್ರಕರಣ ದಾಖಲಿಸಿದ್ದು ನನಗೆ ಗೊತ್ತಿಲ್ಲ. ಬಿ ಎಸ್ ವೈ ಅವರು ಲೈಂಗಿಕ ದೌರ್ಜನ್ಯ ಮಾಡಿರುವುದಕ್ಕೂ ಅದಕ್ಕೂ ಸಂಬಂಧ ಇಲ್ಲ. ಹಾಗಾಗಿ ನಾನು ಅದನ್ನು ತಿಳಿದುಕೊಳ್ಳುವುದು ಅವಶ್ಯಕತೆ ಇಲ್ಲ. ಪೊಲೀಸರ ತನಿಖೆ ಸರಿಯಾಗಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಮನೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಬೇಕು. ಮಹಿಳೆಯೇನೋ ದುರಂತ ಅಂತ್ಯ ಕಂಡರು. ಕನಿಷ್ಠ ಆಕೆಯ ಮಗಳಿಗಾದರೂ ನ್ಯಾಯ ಸಿಗಬೇಕು. ಅದಕ್ಕಾಗಿ ಆರೋಪಿ ಬಿ ಎಸ್ ವೈ ಬಂಧನ ಆಗಬೇಕು" ಎಂದು ವಾದ ಮಂಡಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ವಾದ ವಿವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅರ್ಜಿ ಸಂಬಂಧ ಆದೇಶ ನೀಡಿದ್ದಾರೆ. "ಆರೋಪಿ ಬಿ.ಎಸ್.ಯಡಿಯೂರಪ್ಪನವರು ಜೂನ್ 17 ರಂದು ಸಿಐಡಿ ವಿಚಾರಣೆಗೆ ಹಾಜರಾಗಬೇಕು. ಅಲ್ಲಿಯವರೆಗೆ ಅವರ ಬಂಧನ ಮಾಡಬಾರದು" ಎಂದು ಆದೇಶ ಹೊರಡಿಸಿದರು.
ಬಿ.ಎಸ್.ಯಡಿಯೂರಪ್ಪ ಎರಡು ಅರ್ಜಿಯಲ್ಲಿ ಕೇಳಿಕೊಂಡಂತೆ ಮದ್ಯಂತರ ಜಾಮೀನಾಗಲೀ, ಕೇಸ್ ರದ್ದತಿಯಾಗಲೀ, ಕೇಸ್ ಗೆ ತಡೆಯಾಜ್ಞೆಯಾಗಲೀ ಹೈಕೋರ್ಟ್ ನೀಡಿಲ್ಲ. 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೀಡಿರುವ ಜಾಮೀನು ರಹಿತ ಬಂಧನ ವಾರೆಂಟ್ ಇನ್ನೂ 'ಜೀವಂತ' ಇದೆ. ಕೇವಲ ವಯಸ್ಸಿನ ಕಾರಣಕ್ಕಾಗಿ ಬಿ.ಎಸ್.ಯಡಿಯೂರಪ್ಪರನ್ನು ಜೂನ್ 17 ರ ತನಕ ಬಂಧಿಸುವಂತಿಲ್ಲ. ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಸಂಬಂಧದ ತನಿಖೆಯನ್ನು ಬಿ.ಎಸ್.ಯಡಿಯೂರಪ್ಪ ಆರೋಪಿಯಾಗಿ ಎದುರಿಸಲೇಬೇಕಿದೆ.
ಹಾಗಾಗಿ ಬಿ.ಎಸ್.ಯಡಿಯೂರಪ್ಪನವರಿಗೆ ಸಿಕ್ಕಿರುವುದು ಮಾಧ್ಯಮಗಳು ಹೇಳಿದಂತೆ 'ರಿಲೀಫ್' ಅಲ್ಲ. ಬದಲಾಗಿದೆ ನೈತಿಕವಾಗಿಯೂ, ಕಾನೂನಾತ್ಮಕವಾಗಿ ಯಡಿಯೂರಪ್ಪ ಮತ್ತವರ ಸಿದ್ಧಾಂತ 'ಕುಸಿದಿದೆ' ಎಂಬ ಸಂದೇಶ ಮಾತ್ರ !