ಪೆನ್‌ಡ್ರೈವ್ ಪ್ರಕರಣವನ್ನು ಜೆಡಿಎಸ್ ನಿಭಾಯಿಸುತ್ತಿರುವ ರೀತಿ ಸರಿಯಿದೆಯೇ?
ಪ್ರಜ್ವಲ್ ರೇವಣ್ಣ ಸಿಲುಕಿರುವುದು ಕೇವಲ ಕಾನೂನಾತ್ಮಕ ಸರಿ, ತಪ್ಪುಗಳ ಪ್ರಕರಣದಲ್ಲಿ ಮಾತ್ರವಲ್ಲ; ನೈತಿಕವಾಗಿ ತುಚ್ಛವೆಂದು ಪರಿಗಣಿಸಲ್ಪಡುವ ಪ್ರಕರಣದಲ್ಲೂ ಹೌದು. ಒಂದು ರಾಜಕೀಯ ಪಕ್ಷ ಕಾನೂನಾತ್ಮಕವಾಗಿ ಏಳುಬೀಳು ಕಾಣುವುದು ಸಹಜ. ಆದರೆ ನೈತಿಕವಾಗಿ ಆ ಪಕ್ಷ ಒಮ್ಮೆ ಜನರಿಂದ ತಿರಸ್ಕಾರಕ್ಕೆ ತುತ್ತಾದರೆ ಅದನ್ನು ಮತ್ತೆ ಕಟ್ಟಿಬೆಳೆಸುವುದು ಕಷ್ಟಸಾಧ್ಯದ ಮಾತು. ತಮ್ಮೊಳಗೆ ಉದಾತ್ತ ಗುಣಗಳಿದ್ದಾಗ್ಯೂ ಸೀತೆಯ ವಿಚಾರದಲ್ಲಿ ರಾವಣ, ದ್ರೌಪದಿಯ ವಿಚಾರದಲ್ಲಿ ಕೌರವ ನಮ್ಮ ಜನರ ಪೌರಾಣಿಕ ನೋಟದಲ್ಲಿ ಶಾಶ್ವತವಾಗಿ ಖಳರಾದಂತೆ! ಈ ಹೊತ್ತಲ್ಲಿ, ಈ ಅರಿವು ಕುಮಾರಸ್ವಾಮಿಯವರಿಗೆ ಇರಬೇಕಿತ್ತು. ಕಡೇ ಪಕ್ಷ ಅವರು ಅಮಿತ್ ಶಾ ಮಾತಿಗಿಂತ ತಮ್ಮ ತಂದೆಯವರ ಮಾತಿಗಾದರೂ ಕಿವಿಗೊಡಬೇಕಿತ್ತು.
ಆಕಸ್ಮಾತ್ತಾಗಿ ಉಸುಕಿನಲ್ಲಿ ಸಿಲುಕಿಕೊಂಡ ವ್ಯಕ್ತಿ ಮಾಡಬೇಕಾದ ಮೊದಲ ಕೆಲಸವೆಂದರೆ, ಉದ್ವೇಗಕ್ಕೆ ತುತ್ತಾಗಿ ದೇಹವನ್ನು ಬಡಿದಾಡದೆ, ತುಸು ಹೊತ್ತು ಸಾವಧಾನವಾಗಿ ನಿಂತುಕೊಳ್ಳುವುದು. ನಂತರ, ನಿಧಾನಕ್ಕೆ ಒಂದೊಂದೇ ಹೆಜ್ಜೆಯನ್ನು ಮೇಲಕ್ಕೆ ಎತ್ತಿಡುತ್ತಾ ಹೊರಬರಲು ಯತ್ನಿಸಬೇಕು. ಧಾವಂತದಲ್ಲಿ ಬಡಿದಾಡಲು ಮುಂದಾದರೆ, ಉಸುಕಿನೊಳಕ್ಕೆ ದೇಹ ಮತ್ತಷ್ಟು ಜಾರಿಕೊಳ್ಳುತ್ತಾ ಸಾಗುತ್ತೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಜೆಡಿಎಸ್‌ನ ವರ್ತನೆಯನ್ನು ಕಂಡರೆ, ಉಸುಕಿನಿಂದ ಹೊರಬರುವ ಜಾಣ್ಮೆಯೇ ಆ ಪಕ್ಷದ ನಾಯಕರಿಗಿಲ್ಲ ಅನ್ನಿಸದಿರದು. ಒಂದಂತೂ ಸತ್ಯ, ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನನ್ನು ದಿಢೀರ್ ರಾಜಕೀಯ ತಂತ್ರಗಾರಿಕೆಯಿಂದ ಬಚಾವು ಮಾಡುವ ಯಾವ ಸಾಧ್ಯತೆಗಳೂ ಇಲ್ಲ. ಪ್ರಕರಣ ಅಷ್ಟು ಗಂಭೀರದ್ದು ಮತ್ತು ಪುರಾವೆಸಹಿತವಾದದ್ದು. ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್, ಈ ಹಗರಣದಿಂದ ತನ್ನನ್ನು ತಾನು ಹೇಗೆ ದೂರದೃಷ್ಟಿ ನಡೆಯಿಂದ ಮುಕ್ತಗೊಳಿಸಿಕೊಳ್ಳಬೇಕಿತ್ತು ಅನ್ನುವುದಷ್ಟೇ ಚರ್ಚೆಯ ವಿಚಾರ.
ಮೊದಲನೆಯದಾಗಿ, ಜೆಡಿಎಸ್ ಸಂಸದ ಸಿಲುಕಿಕೊಂಡಿರುವುದು ಲೈಂಗಿಕ ಹಗರಣದಲ್ಲಿ. ಅದೂ ಹಲವಾರು ಸಂತ್ರಸ್ತೆಯರ ಮೇಲೆ ತನ್ನ ಅಧಿಕಾರದ ಪ್ರಭಾವ ಬಳಸಿ ನಡೆಸಿದ ಅತ್ಯಾಚಾರದ ಪ್ರಕರಣ. ಕೇವಲ ರಾಷ್ಟ್ರೀಯ ಮಾಧ್ಯಮಗಳಲ್ಲಷ್ಟೇ ಅಲ್ಲ, ಅಂತರ್‌ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲೂ ಭಾರತಕ್ಕೆ ಕಳಂಕ ಅಂಟಿಸುತ್ತಿರುವ ಕುಖ್ಯಾತ ಲೈಂಗಿಕ ಹಗರಣ ಅದು. ಅಮಿತ್ ಶಾ ತರಹದ ಮೂರನೇ ವ್ಯಕ್ತಿ, ರಾಜಕೀಯ ಕಾರಣಕ್ಕೆ ಇದೊಂದು ಆಧಾರರಹಿತ ಆರೋಪ ಎಂದಿರುವುದನ್ನು ಬಿಟ್ಟರೆ ಸ್ವತಃ ಪ್ರಜ್ವಲ್ ಆಗಲಿ, ಆತನ ಕುಟುಂಬವಾಗಲಿ, ಖುದ್ದು ಕುಮಾರಸ್ವಾಮಿಯೇ ಆಗಲಿ ಇದೊಂದು ಸುಳ್ಳಿನ ಆರೋಪ ಎಂದು ನಿರಾಕರಿಸಿಲ್ಲ. ಜೊತೆಗೆ, ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿರುವುದೇ ಇಡೀ ಪ್ರಕರಣದ ಸತ್ಯತೆಯನ್ನು ಸಾಬೀತು ಮಾಡುತ್ತಿದೆ.
ಇಂತಹ ಸಂದರ್ಭದಲ್ಲಿ, ಜೆಡಿಎಸ್ ಪಕ್ಷ ಇಲ್ಲಿ ಮಾಡಬೇಕಿದ್ದ ಮೊದಲ ಕೆಲಸವೆಂದರೆ, ಉಸುಕಿನಲ್ಲಿ ಸಿಕ್ಕಿಕೊಂಡ ವ್ಯಕ್ತಿ ತನ್ನ ಶಕ್ತಿಯನ್ನು ವ್ಯವಸ್ಥಿತವಾಗಿ ಸಂಚಯಿಸಿಕೊಂಡು, ಒಂದು ಯೋಜನಾಬದ್ಧ ವಿಮೋಚನಾ ಯತ್ನದ ರೂಪುರೇಷೆ ಮೈದಳೆಯುವವರೆಗೆ ಹೇಗೆ ತಾಳ್ಮೆ ವಹಿಸಬೇಕಿತ್ತೋ ಅಷ್ಟುಮಾತ್ರ ಸಾವಧಾನ ತೋರಬೇಕಿತ್ತು. ಆದರೆ ಜೆಡಿಎಸ್ ಪಕ್ಷದ ರಾಜಕೀಯ ಇತಿಹಾಸಗಳನ್ನು ಗಮನಿಸುತ್ತಾ ಬಂದರೆ, ಮಾಡಿದ ಒಂದು ತಪ್ಪನ್ನು ಮುಚ್ಚಲು ಮತ್ತೊಂದು ತಪ್ಪಿನ ಮೊರೆಹೋಗುವ ಧಾವಂತ ಆ ಪಕ್ಷದ ನಾಯಕರಲ್ಲಿ ಕಾಣುತ್ತಾ ಬಂದಿದೆ. ಪೆನ್‌ಡ್ರೈವ್ ಪ್ರಕರಣದಲ್ಲೂ ಅದೇ ಪುನರಾವರ್ತನೆಯಾಗುತ್ತಿದೆ. ಈ ಲೈಂಗಿಕ ಹಗರಣವನ್ನು ಎಷ್ಟು ನಾಜೂಕಾಗಿ ರಾಜಕೀಯದಿಂದ ಬೇರ್ಪಡಿಸಿ, ಅದನ್ನು ವೈಯಕ್ತಿಕ ಪ್ರಕರಣ ಎನ್ನುವಂತೆ ಬಿಂಬಿಸಲಾಗುವುದೋ ಅಷ್ಟು ಜೆಡಿಎಸ್‌ಗೆ ಅನುಕೂಲವಿರುತ್ತದೆ. ಜೆಡಿಎಸ್ ಹೀಗೆ ನಾಜೂಕುತನ ಪ್ರದರ್ಶಿಸಿದಷ್ಟೂ ಎದುರಾಳಿಗಳು ಆ ಪ್ರಕರಣವನ್ನು ಜೆಡಿಎಸ್‌ಗೆ ಥಳುಕು ಹಾಕಿ ರಾಜಕೀಯಗೊಳಿಸುವ ಪ್ರಯತ್ನಗಳನ್ನು ಹೆಚ್ಚೆಚ್ಚು ನಡೆಸುತ್ತಾರೆ. ಅದರಿಂದ ನುಣುಚಿಕೊಳ್ಳುವ ತಂತ್ರಗಾರಿಕೆ ಜೆಡಿಎಸ್‌ನ ಮೊದಲ ಆದ್ಯತೆಯಾಗಿರಬೇಕಿತ್ತು.
ಆದರೆ ಇಲ್ಲಿ ಎಲ್ಲಾ ಉಲ್ಟಾ ನಡೆಯುತ್ತಿದೆ. ಜೆಡಿಎಸ್ ಪಕ್ಷವೇ ಪ್ರಕರಣದ ಮೈಮೇಲೆ ಬಿದ್ದು ರಾಜಕೀಯಗೊಳಿಸುತ್ತಿದೆ. ಪ್ರಕರಣ ರಾಜಕೀಯಗೊಂಡಷ್ಟೂ ಎದುರಾಳಿಗಳಿಗೆ ಅನುಕೂಲ, ಜೆಡಿಎಸ್‌ಗೆ ರಾಜಕೀಯವಾಗಿ ಸಂಕಷ್ಟ. ಇಂತಹ ವಿಚಾರಗಳಲ್ಲಿ ದೇವೇಗೌಡರಿಗೆ ಇದ್ದ ಅನುಭವ, ಮುನ್ನೋಟ ಕುಮಾರಸ್ವಾಮಿಯವರಿಗೆ ಇಲ್ಲ ಅನ್ನುವುದು ಇಲ್ಲಿ ಮನದಟ್ಟಾಗುತ್ತದೆ. ದೇವೇಗೌಡರು ಈ ಪ್ರಕರಣದ ಕುರಿತು ಇದುವರೆಗೆ ಬಾಯಿತೆರೆದಿಲ್ಲ. ತಮ್ಮ ಈ ಇಳಿವಯಸ್ಸಿನಲ್ಲಿ ಪ್ರಕರಣದಿಂದ ಆಘಾತಗೊಂಡು ಮೌನಕ್ಕೆ ಶರಣಾಗಿದ್ದಾರೆ ಎನ್ನುವುದು ಬಹುಶಃ ದೇವೇಗೌಡರ ರಾಜಕಾರಣವನ್ನು ಅರ್ಥ ಮಾಡಿಕೊಳ್ಳದವರ ಮೇಲ್ಮೈ ವಿಶ್ಲೇಷಣೆಯಾಗುತ್ತದೆ. ಕೇವಲ ಹತ್ತು ದಿನಗಳ ಹಿಂದೆ, ಅವರು ಚುನಾವಣಾ ಪ್ರಚಾರಗಳಲ್ಲಿ ತೋರಿದ ಆಸಕ್ತಿ, ಆ ಕಿಚ್ಚು, ಆ ರೋಮಾಂಚಕಾರಿ ಭಾಷಣದ ಝಲಕ್ಕುಗಳು ದೇವೇಗೌಡರು ಎಂತಹ ಹುರುಪಿನ ರಾಜಕಾರಣಿ ಎಂಬುದನ್ನು ಸಾಕ್ಷೀಕರಿಸುತ್ತವೆ. ಹೊರಜಗತ್ತಿಗೆ ಅವರು ಮೌನವಾಗಿರಬಹುದು, ಆದರೆ ಪಕ್ಷದೊಳಗೆ ಅರ್ಥಾತ್ ಕುಟುಂಬದೊಳಗೆ ಅವರು ಈ ಪ್ರಕರಣದ ಕುರಿತು ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ತಮ್ಮ ಅಳಿಯ, ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಅವರನ್ನು ಮನೆಗೆ ಕರೆಸಿಕೊಂಡು ಸಮಾಲೋಚಿಸಿದ್ದಾಗಲಿ, ಅರೆಸ್ಟ್ ಆಗುವ ಸಮಯದಲ್ಲಿ ಎಚ್.ಡಿ. ರೇವಣ್ಣ ದೇವೇಗೌಡರ ಮನೆಯಲ್ಲಿ ಇದ್ದುದಾಗಲಿ ಎಲ್ಲವೂ, ದೇವೇಗೌಡರು ಈ ಪ್ರಕರಣದಲ್ಲಿ ಆ್ಯಕ್ಟಿವ್ ಆಗಿರುವುದಕ್ಕೆ ಸಾಕ್ಷಿ. ಅಷ್ಟಾದರೂ ಅವರು ಸಾರ್ವಜನಿಕವಾಗಿ ಮಾತು ಚೆಲ್ಲುತ್ತಿಲ್ಲ. ಯಾಕೆಂದರೆ, ಅನುಭವಿ ರಾಜಕಾರಣಿಯಾದ ಅವರಿಗೆ ತಾವೀಗ ಉಸುಕಿನಲ್ಲಿ ಸಿಲುಕಿದ್ದೇವೆ ಎಂದು ಅರ್ಥವಾಗಿದೆ. ಸಾವಧಾನದ ಮೊರೆ ಹೋಗಿದ್ದಾರೆ.
ಆದರೆ ಒಮ್ಮೊಮ್ಮೆ ತಮ್ಮ ತಂದೆಗೇ ಬುದ್ಧಿ ಹೇಳುವಷ್ಟು ಆತುರ ತೋರುವ ಕುಮಾರಸ್ವಾಮಿಯವರು ಈ ಸಂಯಮವನ್ನು ತೋರುತ್ತಿಲ್ಲ. ಅವರೀಗ, ಸಂಪೂರ್ಣ ಬಿಜೆಪಿ ರಾಷ್ಟ್ರೀಯ ನಾಯಕರ ಸಮ್ಮೋಹಿನಿಗೆ ಒಳಗಾದಂತೆ ಕಾಣುತ್ತದೆ. ಯಾಕೆಂದರೆ, ಪ್ರಕರಣ ಹೊರಬಂದ ಆರಂಭದಲ್ಲಿ ಕುಮಾರಸ್ವಾಮಿ ಗೊಂದಲದಲ್ಲಿದ್ದರು. ‘‘ಉಪ್ಪು ತಿಂದವರು ನೀರು ಕುಡಿಯಲೇಬೇಕು’’ ಎಂದರು; ‘‘ರೇವಣ್ಣನ ಕುಟುಂಬವೇ ಬೇರೆ ನಮ್ಮ ಕುಟುಂಬವೇ ಬೇರೆ’’ ಎಂದು ಮುಜುಗರಕ್ಕೆ ಈಡಾದರು. ಇದನ್ನು ಹೇಗೆ ನಿಭಾಯಿಸಬೇಕೆನ್ನುವ ಬಗ್ಗೆಯೇ ಅವರಿಗೆ ಸ್ಪಷ್ಟತೆ ಇರಲಿಲ್ಲ. ಸ್ಪಷ್ಟತೆ ಇರಲಿಲ್ಲ ಅನ್ನುವುದಕ್ಕಿಂತ ತಮ್ಮ ಅಣ್ಣನ ಕುಟುಂಬದವರ (ಭವಾನಿ ರೇವಣ್ಣ) ರಾಜಕೀಯ ಯಜಮಾನಿಕೆಗಳಿಂದಲೇ ತಮಗೆ ಈ ಸಂಕಷ್ಟ ಎದುರಾಗಿದೆ ಎಂಬ Irritation ಭಾವನೆಯನ್ನು ಅನುಭವಿಸುತ್ತಿದ್ದಂತೆ ಕಾಣಿಸಿತು. ಹಾಗಾಗಿ ಪ್ರಕರಣವನ್ನು ಸಂಪೂರ್ಣವಾಗಿ ಅವರ ಕುಟುಂಬಕ್ಕೆ ದಾಟಿಸಿಬಿಡುವ ಧಾವಂತ ಅವರ ವರ್ತನೆಗಳಲ್ಲಿ ಕಾಣುತ್ತಿತ್ತು.
ಆದರೆ ಯಾವಾಗ, ಅವರು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದರೋ, ಆನಂತರ ಪ್ರಕರಣವನ್ನು ನೇರವಾಗಿ ರಾಜಕೀಯಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಕರ್ನಾಟಕದಲ್ಲಿ ಇನ್ನೂ ಎರಡನೇ ಹಂತದ ಮತದಾನ ನಡೆಯುತ್ತಿದ್ದ ಸಮಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಡಿ.ಕೆ. ಶಿವಕುಮಾರ್ ಅವರನ್ನು ಈ ಸಂಚಿನ ಭಾಗವಾಗಿಸಲು ಯತ್ನಿಸಿದರು. ಅದರ ಮುಂದುವರಿದ ಭಾಗದಂತೆ ಜೆಡಿಎಸ್ ಕಾರ್ಯಕರ್ತರಿಂದ ಕೆಲವೆಡೆ ಪ್ರತಿಭಟನೆ ನಡೆಸಲಾಯಿತು. ದೂರುಗಳನ್ನೂ ಕೊಡಲಾಯಿತು. ಕುಮಾರಸ್ವಾಮಿಯವರ ಈ ವರ್ತನೆಗಳನ್ನು ನೋಡಿದಾಗ, ಅವರು ತಾವು ಸಿಲುಕಿರುವ ಉಸುಕಿನೊಟ್ಟಿಗೇ ಸಂಘರ್ಷಕ್ಕೆ ಇಳಿದಂತೆ ಕಾಣುತ್ತದೆ. ಇದರ ಪರಿಣಾಮ ಏನಾಗಬಹುದು ಎಂಬ ಅಂದಾಜು ಅವರಿಗಿರಲಿಕ್ಕಿಲ್ಲ ಅಥವಾ ಬೇಕಾಗಿರಲಿಕ್ಕಿಲ್ಲ. ಅಮಿತ್ ಶಾ ಹಾಕಿಕೊಟ್ಟ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರುವುದಷ್ಟೇ ಅವರ ತಲೆಯಲ್ಲಿ ಕೂತಂತೆ ಕಾಣುತ್ತೆ.
ಧರ್ಮ ಮತ್ತು ರಾಷ್ಟ್ರೀಯತೆಯ ಮೇಲೆ ರಾಜಕಾರಣ ಮಾಡುವ ಬಿಜೆಪಿಗೆ ಪ್ರಾದೇಶಿಕ ಅಸ್ಮಿತೆ ಎನ್ನುವುದು ಯಾವತ್ತಿಗೂ ಅಪಥ್ಯ ಸಂಗತಿ. ಕಳೆದ ಸಲ ಕೆಂಪುಕೋಟೆಯ ಮೇಲೆ ಭಾಷಣ ಮಾಡುವಾಗ ಸ್ವತಃ ಮೋದಿಯವರೇ ‘ಪ್ರಾದೇಶಿಕತೆಯನ್ನು ಕಿತ್ತೆಸೆಯಿರಿ’ ಎಂದು ದೇಶದ ಜನರಿಗೆ ಕರೆಕೊಟ್ಟಿದ್ದರು. ಪ್ರಾದೇಶಿಕ ಅಸ್ಮಿತೆಗೆ ಹಲವು ರೂಪಗಳಿವೆ. ಜನ, ಭಾಷೆ, ಬದುಕು, ಆಚರಣೆ, ಜನಪದ ಕಲೆ, ನೆಲಮೂಲದ ಸಾಂಸ್ಕೃತಿಕ ಚರಿತ್ರೆಯ ಜೊತೆಗೆ ಅಲ್ಲಿ ಮೈದಳೆದ ಪ್ರಾದೇಶಿಕ ಪಕ್ಷಗಳು ಕೂಡಾ ಪ್ರಾದೇಶಿಕತೆಯ ಅಸ್ಮಿತೆಯ ಒಂದು ಭಾಗ. ತಮಿಳುನಾಡಿನಲ್ಲಿ ಜಾತಿಕ್ರೌರ್ಯ ಮತ್ತು ಮೌಢ್ಯಗಳು ಹೆಚ್ಚಾಗಿದ್ದರೂ, ಬಿಜೆಪಿಗೆ ಅಲ್ಲಿ ನೆಲೆಯೂರಲು ಸಾಧ್ಯವಾಗದೆ ಇರುವುದಕ್ಕೆ ಕಾರಣ ದ್ರಾವಿಡ ಚಳವಳಿಯ ಮೇಲೆ ರೂಪುತಳೆದ ಅಲ್ಲಿನ ಪ್ರಾದೇಶಿಕ ಪಕ್ಷಗಳ ಕಸುವಿನಿಂದ. ಅಂತಹ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡುವುದು ಬಿಜೆಪಿಯ ಹಿಡನ್ ಅಜೆಂಡಾ. ಆಗ ಒಂದು ಸಾಮಾನ್ಯ ಸಮೂಹ ಸನ್ನಿಯ ಮೂಲಕ ಇಡೀ ದೇಶವನ್ನು ಸುಲಭವಾಗಿ ವಶೀಕರಣ ಮಾಡಬಹುದು. ಎಲ್ಲೆಲ್ಲಿ ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆಯೋ ಅಲ್ಲೆಲ್ಲ ಅವು ನೆಲೆ ಕಳೆದುಕೊಂಡು ಶಿಥಿಲವಾಗಿವೆ ಅಥವಾ ಅರ್ಧದಲ್ಲೇ ಎಚ್ಚೆತ್ತುಕೊಂಡು ವಿಷವರ್ತುಲದಿಂದ ಹೊರಬರುವ ಯತ್ನ ಮಾಡಿವೆ.
ಜೆಡಿಎಸ್, ಬಿಜೆಪಿ ಜೊತೆ ಮೈತ್ರಿಗೆ ಮುಂದಾದಾಗ ಬಹಳಷ್ಟು ರಾಜಕೀಯ ವಿಶ್ಲೇಷಕರು ಜೆಡಿಎಸ್ ಪಕ್ಷದ ಭವಿಷ್ಯದ ಕುರಿತು ಇಂತಹ ಆತಂಕದ ಮಾತುಗಳನ್ನಾಡಿದ್ದರು. ಅದೀಗ ನಿಜವಾಗುವ ಹಾದಿಯಲ್ಲಿದೆ. ಈ ಪೆನ್‌ಡ್ರೈವ್ ಹೊರಬಂದಿದ್ದರ ಹಿಂದೆಯೂ ಬಿಜೆಪಿ ನಾಯಕರುಗಳ ವ್ಯವಸ್ಥಿತ ಕೈವಾಡ ಇದೆ ಅನ್ನೋದನ್ನು ಸ್ವತಃ ಕುಮಾರಸ್ವಾಮಿಯವರೇ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದುಂಟು. ಆದರೂ ಡಿ.ಕೆ. ಶಿವಕುಮಾರ್ ಎಂಬ ಒಕ್ಕಲಿಗ ನಾಯಕನೆದುರು, ಎಚ್.ಡಿ. ಕುಮಾರಸ್ವಾಮಿ ಎಂಬ ಮತ್ತೋರ್ವ ಒಕ್ಕಲಿಗ ನಾಯಕನನ್ನು ರೊಚ್ಚಿಗೆಬ್ಬಿಸಿ, ಆ ಸಮುದಾಯದಲ್ಲಿ ರಾಜಕೀಯ ನಿರ್ವಾತ ಸೃಷ್ಟಿಸಿ, ಧರ್ಮ-ದೇಶಭಕ್ತಿ ಹೆಸರಲ್ಲಿ ಆ ಸಮುದಾಯವನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳುವ ಬಿಜೆಪಿಯ ಹುನ್ನಾರ ಕುಮಾರಸ್ವಾಮಿಯವರಿಗೆ ಈಗಲೂ ಅರ್ಥವಾದಂತೆ ಕಾಣುತ್ತಿಲ್ಲ. ಡಿ.ಕೆ. ಶಿವಕುಮಾರ್ ಅಥವಾ ಬೇರಾವುದೇ ಕಾಂಗ್ರೆಸ್ ಸ್ಥಳೀಯ ನಾಯಕರು ಈ ಪೆನ್‌ಡ್ರೈವ್ ಅನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿರಲೂಬಹುದು. ಚುನಾವಣೆಯಂತಹ ತಂತ್ರಗಾರಿಕೆಯ ಸಮಯದಲ್ಲಿ ಎದುರಾಳಿಗಳಿಗೆ ಹಿನ್ನಡೆ ಉಂಟುಮಾಡಲು ಇವತ್ತಿನ ರಾಜಕಾರಣದಲ್ಲಿ ಇಂತಹ ಪ್ರಯತ್ನಕ್ಕಿಳಿಯುವುದು ಸಹಜವೆನಿಸಿಬಿಟ್ಟಿದೆ. ಒಂದುವೇಳೆ, ಕಾಂಗ್ರೆಸ್ ನಾಯಕರ ಇಂತಹ ಪೆನ್‌ಡ್ರೈವ್ ತಮ್ಮ ಕೈಗೆ ಸಿಕ್ಕಿದ್ದರೆ ಕುಮಾರಸ್ವಾಮಿಯವರಾಗಲಿ ಅಥವಾ ಬಿಜೆಪಿ ನಾಯಕರಾಗಲಿ ಸುಮ್ಮನೇ ಕೂರುತ್ತಿದ್ದರಾ? ಕೊನೆಗೂ ಬಹಿರಂಗಗೊಳ್ಳದ ಒಂದು ಖಾಲಿ ಪೆನ್‌ಡ್ರೈವ್ ಇಟ್ಟುಕೊಂಡು ಕುಮಾರಸ್ವಾಮಿಯವರು ಈ ಹಿಂದೆ ಎಷ್ಟೆಲ್ಲ ರಾಜಕೀಯ ಗದ್ದಲ ಸೃಷ್ಟಿಸಿದ್ದರು ಎನ್ನುವುದಕ್ಕೆ ಈ ನಾಡೇ ಸಾಕ್ಷಿಯಾಗಿದೆ.
ನಮ್ಮ ಜನರ ನಡುವೆ ಒಂದು ಮಾತಿದೆ. ಎದುರಿಗಿರುವ ಎದುರಾಳಿಗಿಂತ ಪಕ್ಕದಲ್ಲೇ ಇರುವ ಬಗಲ್ ಕಾ ದುಷ್ಮನ್ ಬಲು ಅಪಾಯಕಾರಿ ಅಂತ. ಪೆನ್‌ಡ್ರೈವ್ ಅನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದರಲ್ಲಿ ತಮ್ಮ ಜೊತೆಗೇ ಇದ್ದ ಬಿಜೆಪಿ ಸ್ಥಳೀಯ ನಾಯಕರ ಕೈವಾಡ ಇರುವುದು ಮತ್ತು ಅಂತಹ ನಾಯಕರ ವಿರುದ್ಧ ಆ ಪಕ್ಷ ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಕಣ್ಣಾರೆ ಕಂಡ ನಂತರವೂ ಕುಮಾರಸ್ವಾಮಿಯವರು ಅಮಿತ್ ಶಾ ಹಾಕಿಕೊಟ್ಟ ಕಾರ್ಯಯೋಜನೆಯಂತೆ ಪ್ರಕರಣವನ್ನು ತಾವಾಗಿಯೇ ರಾಜಕೀಯಗೊಳಿಸಿ, ಡಿ.ಕೆ. ಶಿವಕುಮಾರ್ ಥರದ ಕಾಂಗ್ರೆಸ್ ನಾಯಕರ ಮೇಲೆ ವೈಯಕ್ತಿಕ ದಾಳಿಗಿಳಿದು ಪಕ್ಷದ ಭವಿಷ್ಯವನ್ನು ಮತ್ತಷ್ಟು ಕಗ್ಗತ್ತಲಿಗೆ ತಳ್ಳುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಸಿಲುಕಿರುವುದು ಕೇವಲ ಕಾನೂನಾತ್ಮಕ ಸರಿ, ತಪ್ಪುಗಳ ಪ್ರಕರಣದಲ್ಲಿ ಮಾತ್ರವಲ್ಲ; ನೈತಿಕವಾಗಿ ತುಚ್ಛವೆಂದು ಪರಿಗಣಿಸಲ್ಪಡುವ ಪ್ರಕರಣದಲ್ಲೂ ಹೌದು. ಒಂದು ರಾಜಕೀಯ ಪಕ್ಷ ಕಾನೂನಾತ್ಮಕವಾಗಿ ಏಳುಬೀಳು ಕಾಣುವುದು ಸಹಜ. ಆದರೆ ನೈತಿಕವಾಗಿ ಆ ಪಕ್ಷ ಒಮ್ಮೆ ಜನರಿಂದ ತಿರಸ್ಕಾರಕ್ಕೆ ತುತ್ತಾದರೆ ಅದನ್ನು ಮತ್ತೆ ಕಟ್ಟಿಬೆಳೆಸುವುದು ಕಷ್ಟಸಾಧ್ಯದ ಮಾತು. ತಮ್ಮೊಳಗೆ ಉದಾತ್ತ ಗುಣಗಳಿದ್ದಾಗ್ಯೂ ಸೀತೆಯ ವಿಚಾರದಲ್ಲಿ ರಾವಣ, ದ್ರೌಪದಿಯ ವಿಚಾರದಲ್ಲಿ ಕೌರವ ನಮ್ಮ ಜನರ ಪೌರಾಣಿಕ ನೋಟದಲ್ಲಿ ಶಾಶ್ವತವಾಗಿ ಖಳರಾದಂತೆ! ಈ ಹೊತ್ತಲ್ಲಿ, ಈ ಅರಿವು ಕುಮಾರಸ್ವಾಮಿಯವರಿಗೆ ಇರಬೇಕಿತ್ತು. ಕಡೇ ಪಕ್ಷ ಅವರು ಅಮಿತ್ ಶಾ ಮಾತಿಗಿಂತ ತಮ್ಮ ತಂದೆಯವರ ಮಾತಿಗಾದರೂ ಕಿವಿಗೊಡಬೇಕಿತ್ತು.