ಹೈಕಮಾಂಡ್ ಎಚ್ಚರಿಕೆ ಬೆನ್ನಿಗೇ ಮತ್ತೆ ನಾಯಕರ ಹೇಳಿಕೆ

Update: 2023-11-08 07:08 GMT
Editor : Thouheed | Byline : ಆರ್. ಜೀವಿ

ಚಿತ್ರ ಕೃಪೆ- twitter@CMofKarnataka

ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ಗೊಂದಲಗಳಿಗೆ ಕೊನೆಯೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ, ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಡಿಢೀರ್ ಭೇಟಿ ನೀಡಿ ಸಭೆ ಕರೆದು ‘ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಬಹಿರಂಗವಾಗಿ ಮಾತನಾಡಿದರೆ ಶಿಸ್ತುಕ್ರಮ ಖಚಿತ’ ಎಂದು ಬುಧವಾರವಷ್ಟೇ ಎಚ್ಚರಿಕೆ ನೀಡಿದ್ದರು.

ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡದೆ, ಅನಗತ್ಯ ವಿಚಾರಗಳನ್ನು ಎಳೆದು ತರುವ ಸಚಿವರ , ಶಾಸಕರ ಬಾಯಿಗೆ ಬೀಗ ಹಾಕುವ ಕೆಲಸ ನಿಮ್ಮದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಳಿ ಹೈಕಮಾಂಡ್ ನಾಯಕರು ಹೇಳಿ ಹೋಗಿದ್ದರು.

ಅದರ ಮರುದಿನವೇ, ‘ಮುಂದಿನ ಐದು ವರ್ಷ ನಮ್ಮದೇ ಸರ್ಕಾರ ಇರುತ್ತೆ, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವೆ’ ಎಂದು ಸಿದ್ದರಾಮಯ್ಯ ನವರೇ ಬಹಿರಂಗವಾಗಿ ಹೇಳಿದ್ದಾರೆ. ಈ ಮೂಲಕ ಪಕ್ಷದೊಳಗೆ ಸಿಎಂ ಹುದ್ದೆ ಬಗ್ಗೆ ಆಗಾಗ ಗೊಂದಲದ ಹೇಳಿಕೆಗಳನ್ನು ಕೊಡುವ ತಮ್ಮ ಬೆಂಬಲಿಗರು ಹಾಗೂ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಯಾವಾಗ ಸಿಎಂ ಬಾಯಿಂದಲೆ ಈ ಮಾತು ಹೊರಬಿತ್ತೋ, ಅದರ ಬೆನ್ನಲ್ಲೇ ಈ ಹೇಳಿಕೆ, ಕಾಂಗ್ರೆಸ್‌ನಲ್ಲಿ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜತೆಗೆ ಮಂಗಳವಾರ ನಡೆಸಿದ್ದ ಸಭೆಯಲ್ಲಿ, ಅಧಿಕಾರ ಹಂಚಿಕೆ, ಪಕ್ಷ, ಸರ್ಕಾರದ ಬಗ್ಗೆ ಯಾರೊಬ್ಬರೂ ಮಾತನಾಡದಂತೆ ನೋಡಿಕೊಳ್ಳುವ ಹೊಣೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ವಹಿಸಿದ್ದರು. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಎಲ್ಲ ವಿಷಯವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಲೋಕಸಭೆ ಚುನಾವಣೆಯಲ್ಲಿ 20ರಿಂದ 25 ಸ್ಥಾನ ಗೆಲ್ಲಿಸಲು ಒಗ್ಗೂಡಿ ಕೆಲಸ ಮಾಡಿ ಎಂದೂ ವೇಣುಗೋಪಾಲ್ ಸಲಹೆ ನೀಡಿದ್ದರು’ ಎಂದು ಮೂಲಗಳು ಹೇಳಿದ್ದವು.

ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಕುರಿತ ವಿವಾದ ತಾರಕಕ್ಕೇರಿದಾಗ, ‘ಪಕ್ಷ–ಸರ್ಕಾರದ ವಿಷಯದಲ್ಲಿ ಯಾರೊಬ್ಬರೂ ಮಾತನಾಡಕೂಡದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಆ ಬಳಿಕ, ಕೆಲದಿನ ಈ ವಿಚಾರಗಳು ಮುನ್ನೆಲೆಗೆ ಬಂದಿರಲಿಲ್ಲ.

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು, ‘ಎರಡು ವರ್ಷಗಳ ಬಳಿಕ ಶಿವಕುಮಾರ್‌ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ’ ಎಂದು ಹೇಳುವ ಮೂಲಕ ಮತ್ತೊಂದು ದಾಳ ಉರುಳಿಸಿದ್ದರು.

ಇದರ ಬೆನ್ನಲ್ಲೇ, ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಯಲ್ಲಿ ಭೋಜನ ಕೂಟದ ಹೆಸರಿನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಭಾಗಿಯಾಗಿದ್ದರು. ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ಪಟ್ಟು ಹೆಚ್ಚಾದರೆ, ದಲಿತ ಮುಖ್ಯಮಂತ್ರಿಯ ಪ್ರತಿದಾಳ ಉರುಳಿಸುವ ಬಗ್ಗೆ ತಂತ್ರಗಾರಿಕೆ ಹೆಣೆಯವುದು ರಹಸ್ಯ ಸಭೆಯ ಕಾರ್ಯಸೂಚಿ ಎಂದೂ ಹೇಳಲಾಗಿತ್ತು.

ಏಕೆಂದರೆ, ಅದೇ ದಿನ ಮಧ್ಯಾಹ್ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೇ ಮೂರು ತಾಸಿಗೂ ಹೆಚ್ಚು ಹೊತ್ತು ಸಭೆ ನಡೆಸಿದ್ದರು. ಈ ಸಭೆಯ ವೇಳೆ, ಭೋಜನ ಕೂಟದ ಸುಳಿವೇ ಇರಲಿಲ್ಲ. ಅಂದು ಬೆಂಗಳೂರಿನಲ್ಲೇ ಶಿವಕುಮಾರ್ ಇದ್ದರೂ ಭೋಜನಕೂಟಕ್ಕೆ ಅವರಿಗೆ ಆಹ್ವಾನ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನೇ ಹೊರಗಿಟ್ಟು ಸಭೆ ನಡೆಸಿರುವುದು, ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು.

ಸರ್ಕಾರ ಮತ್ತು ಪಕ್ಷದೊಳಗೆ ಉಲ್ಬಣಗೊಳ್ಳುತ್ತಿರುವ ‘ಬಣ ಪೈಪೋಟಿ’ ಪಕ್ಷದ ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿತು. ಸೋಮವಾರ ರಾತ್ರಿ ಬೆಂಗಳೂರಿಗೆ ದೌಡಾಯಿಸಿದ ವೇಣುಗೋಪಾಲ್ ಹಾಗೂ ಸುರ್ಜೇವಾಲಾ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರನ್ನೇ ಕೂರಿಸಿಕೊಂಡು ಸಮಾಲೋಚನೆ ನಡೆಸಿದರು. ಬಹಿರಂಗವಾಗಿ ಮಾತನಾಡದಂತೆ ಸಚಿವರು, ಶಾಸಕರಿಗೆ ನೀವೇ ಸೂಚಿಸಿ, ಅವರ ಮಾತಿನ ಮೇಲೆ ಕಡಿವಾಣ ಹಾಕುವಂತೆ ನೋಡಿಕೊಳ್ಳದಿದ್ದರೆ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಅದರ ಬೆನ್ನಲ್ಲೇ, ಶಿವಕುಮಾರ್ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸುರ್ಜೇವಾಲಾ, ಪಕ್ಷ, ಅಧಿಕಾರ ಹಂಚಿಕೆ, ಸರ್ಕಾರದ ಬಗ್ಗೆ ಮಾತನಾಡಿದರೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಸಿಎಂ ಹೇಳಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ‘ಹೈಕಮಾಂಡ್ ಹೇಳಿದರೆ ಮುಖ್ಯಮಂತ್ರಿಯಾಗಲು ನಾನೂ ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರ ಹೇಳಿಕೆ ವೈಯಕ್ತಿಕವಷ್ಟೇ. ಅಂತಿಮ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್ ಅಂತ ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಹೇಳಿಕೆಗೆ ಸಹಮತವಿಲ್ಲ ಎಂಬಂತೆ ಉತ್ತರಿಸಿದ್ದಾರೆ.

‘ಮುಖ್ಯಮಂತ್ರಿ ಯಾರಾಗಬೇಕು ಅಥವಾ ಯಾರು ಮುಂದುವರಿಯಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವೈಯಕ್ತಿಕವಾದುದು’ ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆನ್ನುವುದು ಕೆಲವರ ವೈಯಕ್ತಿಕ ಹೇಳಿಕೆ. ದೆಹಲಿಯಲ್ಲಿ ಪಕ್ಷದ ವರಿಷ್ಠರಲ್ಲಿ ನಾಲ್ಕು ಮಂದಿ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ’ ‘ಜಿಲ್ಲಾ ಪಂಚಾಯಿತಿ ಸದಸ್ಯರಿಂದ ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿ‍ಪ್ರಾಯ ಹೇಳಿಕೊಳ್ಳಲು ಸ್ವಾತಂತ್ರ್ಯವಿದೆ. ತಪ್ಪೇನಿಲ್ಲ. ಆದರೆ, ಅವರ ಹೇಳಿಕೆ, ಶಾಸನವಲ್ಲ. ಎಲ್ಲವೂ ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ.

ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪರೋಕ್ಷ ಬೆಂಬಲ ಇದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇದೇ ವೇಳೆ ಕೆ.ಎನ್ ರಾಜಣ್ಣ ಹೇಳಿಕೆ ಕೂಡಾ ಗೊಂದಲಗಳಿಗೆ ಕಾರಣವಾಗಿದೆ. "ಸಿದ್ದರಾಮಯ್ಯ ಇರೋವರೆಗೆ ನಾವೆಲ್ಲಾ ಸಿದ್ದರಾಮಯ್ಯ ಪರ.‌ ನಾವು, ಪರಮೇಶ್ವರ್ ಇಬ್ಬರೂ ಅವರ ಪರವಿರುತ್ತೇವೆ. ಸಿದ್ದರಾಮಯ್ಯ ಹೊರತು ಪಡಿಸಿದ್ರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ಬಯಸುತ್ತೇವೆ ಎಂದಿದ್ದಾರೆ ಕೆ.ಎನ್ ರಾಜಣ್ಣ. ಈ ಮೂಲಕ ಸಿದ್ದರಾಮಯ್ಯ ನಂತರ ಡಿಕೆಶಿ ಸಿಎಂ ಆಗಬೇಕು ಎನ್ನುವವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

'ಗೃಹಸಚಿವ ಜಿ.ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ. ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು. ಎಐಸಿಸಿಯವರು ನಮಗೆ ಹೇಳಿದ್ದಾರೆ ಏನು ಮಾತನಾಡಬಾರದು ಅಂತ. ನಾನು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು.‌ ಹಾಗಾಗಿ ನನ್ನ ಮನಸಿನ ಭಾವನೆ ಹೇಳಿದ್ದೇನೆ ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, ಸಿಎಂ ಆಗುವ ಆ ಅದೃಷ್ಟ ಕೂಡಿ ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ಪರ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿದ್ದರಾಮಯ್ಯ ಅವ್ರು ಎರಡೂವರೆ ವರ್ಷ ಮಾತ್ರ ಸಿಎಂ ಎಂಬ ವದಂತಿಗೆ ತೆರೆ ಬಿದ್ದಿದೆ. ಹೈಕಮಾಂಡ್ ಇಂತಹ ತೀರ್ಮಾನ ಮಾಡಿದರೆ ಮುಂದೆ ನೋಡೋಣ ಎಂದಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ಶಾಸಕರ ಬೆಂಬಲದಿಂದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಗೊಂದಲಕ್ಕೆ ತೆರೆ ಎಳೆಯುವುದಕ್ಕಾಗಿಯೇ ಅವರು ಪೂರ್ಣಾವಧಿ ಸಿಎಂ ಅಂತ ಹೇಳಿಕೆ ಕೊಟ್ಟಿರಬಹುದು ಎಂದು ಹೇಳಿದ್ದಾರೆ.

ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಸಿದ್ದರಾಮಯ್ಯ ಹೇಳಿರುವುದು ಸತ್ಯ ಎನ್ನುವ ಮೂಲಕ ಹೇಳಿಕೆಗೆ ತನ್ನ ಬೆಂಬಲ ಸೂಚಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಸೋದರ ಹಾಗೂ ಸಂಸದ ಡಿಕೆ ಸುರೇಶ್ ಅವರು , ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ಈಗ ಸಿಎಂ ಹುದ್ದೆ ಖಾಲಿಯಿಲ್ಲ, ಆ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಇನ್ನೊಂದೆಡೆ ಡಿಕೆಶಿ ಆಪ್ತರೆನಿಸಿಕೊಂಡಿರುವ ಹಲವರು ಡಿಕೆಶಿ ಪರ ಹೇಳಿಕೆ ನೀಡುತ್ತಿದ್ದಾರೆ. 'ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬುದು ಕೇವಲ ನಮ್ಮ ಜಿಲ್ಲೆಯವರ ಬಯಕೆಯಷ್ಟೇ ಅಲ್ಲ. ರಾಜ್ಯದ 224 ಕ್ಷೇತ್ರಗಳಲ್ಲೂ ಅವರು ಸಿ.ಎಂ ಆಗಲೇಬೇಕು ಎಂದು ಜನ ಬಯಸಿದ್ದಾರೆ’ ಎಂದು ಡಿಕೆಶಿ ಅವರ ಆಪ್ತರಾದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದ್ದಾರೆ.

‘ನಮ್ಮ ನಾಯಕರಾದ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ಎಲ್ಲಾ ರೀತಿಯ ಅರ್ಹತೆ ಹೊಂದಿದ್ದಾರೆ. ಎಲ್ಲರಿಗೂ ಅವಕಾಶ ಸಿಗಬೇಕು. ಅವರನ್ನು ಸಿ.ಎಂ ಆಗಿ ನೋಡುವುದು ನಮ್ಮ ಕನಸು. ಒಂದು ಅಥವಾ ಒಂದೂವರೆ ವರ್ಷದ ನಂತರ ಅವರು ಮುಖ್ಯಮಂತ್ರಿ ಆಗುತ್ತಾರೆ. ಇದು ನಮ್ಮೆಲ್ಲರ ಅಭಿಲಾಷೆ ಕೂಡ’ ಎಂದು ಹೇಳಿದ್ದಾರೆ.

ಪರ ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ,

'ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ' ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ರೇಗಿದರು. 'ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದೇವೆ' ಎಂದು ಹೇಳುವ ಮೂಲಕ 'ಮುಂದಿನ ಐದು ವರ್ಷ ನಾನೇ ಸಿ.ಎಂ' ಎಂಬ ಹೇಳಿಕೆ ಸೃಷ್ಟಿಸಿದ ವಿವಾದಕ್ಕೆ ತೆರೆ ಎಳೆಯಲು ಮುಂದಾದರು. 'ಸಿದ್ದರಾಮಯ್ಯ ಬೇಡ ಅಂದರೆ, ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಲಿ' ಎಂಬ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ಈ ಹೇಳಿಕೆ ಸರಣಿ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಕಾದು ನೋಡೋಣ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News