ಕರ್ನಾಟಕದ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿಗೆ ಅಮರಯ್ಯಸ್ವಾಮಿ ಆಯ್ಕೆ
ಯಾದಗಿರಿ : ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಪ್ರತಿ ವರ್ಷ ಕೊಡಮಾಡುವ ಕರ್ನಾಟಕ ಜಾನಪದ ಅಕಾಡೆಮಿ 2023ನೇ ಸಾಲಿನ ಗೌರವ ಪ್ರಶಸ್ತಿಗೆ ತಾಲ್ಲೂಕಿನ ಜಾಲಿಬೆಂಚಿ ಗ್ರಾಮದ ವೇದಮೂರ್ತಿಗಳು ಹಾಗೂ ಹಿರಿಯ ಜಾನಪದ ಭಜನಾ ಕಲಾವಿದ ಅಮರಯ್ಯಸ್ವಾಮಿ ಹಿರೇಮಠ ಆಯ್ಕೆಯಾಗಿದ್ದಾರೆ.
ಈ ಕುರಿತು ಬೆಂಗಳೂರಿನ ಕನ್ನಡ ಭವನದಲ್ಲಿ ಅಕಾಡೆಮಿ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಅಮರಯ್ಯಸ್ವಾಮಿ ಹಿರೇಮಠ ಅವರ ಹೆಸರು ಘೋಷಿಸಿದರು. ಪ್ರಶಸ್ತಿ, 25 ಸಾವಿರ ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ದಿನ ಮತ್ತು ಸ್ಥಳದ ಕುರಿತು ಶೀಘ್ರದಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಅಮರಯ್ಯಸ್ವಾಮಿ ಅವರು ಷಣ್ಮುಕಯ್ಯ ಗುಂಡಮ್ಮ ದಂಪತಿಗಳ ಮಗನಾಗಿ 1 ಜೂನ್ 1965 ರಲ್ಲಿ ಜನಿಸಿದರು. ಓದಿರುವುದು 10ನೇ ತರಗತಿಯಾಗಿದರು ಮೊದಲಿನಿಂದಲೂ ಜಾನಪದದಲ್ಲಿ ತುಂಬಾ ಆಸಕ್ತಿ. ಭಜನೆ, ಪುರವಂತಿಗೆ, ತತ್ವ ಪದಗಳು ಇವರ ಮೆಚ್ಚಿನ ಹಾಡುಗಳಾಗಿವೆ. ಅಲ್ಲದೆ ಹಾರ್ಮೋನಿಯಂ ನುಡಿಸುವ, ಕೊಳಲು ವಾದನ ಮಾಡುವ ಹಾಗೂ ತಮ್ಮ ಸುಮಧುರ ಕಂಠದಿಂದ ಜಾನಪದ ಹಾಡಿನ ಮೂಲಕ ತಾಲ್ಲೂಕಿನ ಎಲ್ಲರ ಚಿರಪರಿಚಿತರಾಗಿದ್ದಾರೆ. ಇವರ ತಾಯಿಯೂ ಕೂಡ ಜಾನಪದದಲ್ಲಿ ತುಂಬಾ ಆಸಕ್ತಿ ಉಳ್ಳವರು, ಅವರಿಂದ ಜಾನಪದ ಗಾಯನದ ಆಸಕ್ತಿ ಇವರಲ್ಲಿಯೂ ಮೂಡಿಬಂದಿದೆ. ಅಮರಯ್ಯಸ್ವಾಮಿಯವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ತಾಲ್ಲೂಕಿನ ಅನೇಕ ಜನ ಹಿರಿಯ ಜಾನಪದ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.