ಯಾದಗಿರಿ: ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ
Update: 2024-11-04 05:09 GMT
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಸುಗುರ ಗ್ರಾಮದಲ್ಲಿ ಸಾಲಬಾಧೆಗೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಸೂಗುರು ಗ್ರಾಮದ ಬಸವರಾಜ ಮುಷ್ಠಹಳ್ಳಿ ಆತ್ಮಹತ್ಯೆ ಮಾಡಿಕೊಂಡ ರೈತ. ಎರಡು ಎಕರೆ ಜಮೀನು ಹೊಂದಿದ್ದ ಇವರು ಕೆಲವು ದಿನಗಳ ಹಿಂದೆ ಕೃಷ್ಣಾ ನದಿಯ ನೆರೆಯಲ್ಲಿ ಹಾಕಿರುವ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಸವರಾಜ ಸುರಪುರ ನಗರದ ರಂಗಂಪೇಟೆಯ ಎಡಿಬಿ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಸಾಲ ಹಾಗೂ ಖಾಸಗಿಯವರ ಬಳಿಯಲ್ಲಿ ನಾಲ್ಕು ಲಕ್ಷ ರೂ, ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ. ಇತ್ತ ಬೆಳೆಯು ಇಲ್ಲದೆ ಸಾಲವು ತೀರಿಸಲಾಗದೆ ನೊಂದ ಅವರು ರವಿವಾರ ರಾತ್ರಿ ಗ್ರಾಮದಲ್ಲಿನ ಶಾಲೆಯಲ್ಲಿ ಕುತ್ತಿಗೆಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸುರಪುರ ಠಾಣಾ ಪೊಲೀಸರು ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.