ಯಾದಗಿರಿ | ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

Update: 2024-11-22 13:39 GMT

ಯಾದಗಿರಿ : ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಎಚ್ಚರ ವಹಿಸುವಂತೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ವಿವಿಧ ವಸತಿನಿಲಯಗಳಲ್ಲಿರುವ ವಿದ್ಯಾರ್ಥಿಗಳು ಬಡ ಕುಟುಂಬಗಳಿಂದ ಬಂದಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ನೀರು, ಊಟೋಪಹಾರದ ಕೊರತೆಯಾಗಬಾರದು. ಅದರಂತೆ ಎಲ್ಲಾ ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.

ಜಿಲ್ಲೆಯಲ್ಲಿ ಜಲಧಾರೆ, ಜಲಜೀವನ ಮಿಷನ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈವರೆಗೆ ಜೆಜೆಎಮ್ ದಲ್ಲಿ ಪೂರ್ಣಗೊಂಡ ಕಾಮಗಾರಿ, ಟ್ರಾಯಲ್ ರನ್ ಆಗಿರುವ ಕಾಮಗಾರಿ, ಖರ್ಚು ವೆಚ್ಚಗಳ ವರದಿ ಸಲ್ಲಿಸಬೇಕು. ಜಲಧಾರೆ ಯೋಜನೆಯಡಿ ಅಳವಡಿಸಿದ ಪೈಪ್ಲೈನ್ ಆಧಾರದಲ್ಲಿ ಬಿಲ್ ಪಾವತಿಸಬೇಕು. ಓವರ್ ಹೆಡ್ ಟ್ಯಾಂಕ್‌ಗಳಿಗೆ ಹೆಚ್ಚುವರಿ ಅನುದಾನ ಬಳಕೆ, ನುರಿತ ಅಭಿಯಂತರರಿಂದ ಕೆಲಸ ಪಡೆಯಬೇಕು. ಈ ಯೋಜನೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿ ತಿಳಿಸಿದರು.

ಜಿಲ್ಲೆಯಲ್ಲಿ ನೂತನವಾಗಿ ನೇಮಕಗೊಳ್ಳುವ ವೈದ್ಯಾಧಿಕಾರಿಗಳಿಗೆ ಸಕಾಲಕ್ಕೆ ವೇತನ ಪಾವತಿಸಬೇಕು. ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಪ್ರಾಥಮಿಕ, ಆರೋಗ್ಯ ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರಗಳ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣ ಪತ್ತೆ ಹಚ್ಚಬೇಕು. ಅನ್ನಭಾಗ್ಯ ಯೋಜನೆ ಲಾಭ ಅರ್ಹರಿಗೆ ದೊರೆಯಬೇಕು. ಅರ್ಹರು ಈ ಯೋಜನೆಯಿಂದ ವಂಚಿತರಾಗದಂತೆ ನಿಗಾವಹಿಸಲು ಸೂಚನೆ ನೀಡಿದರು.

ಯಾದಗಿರಿ ವೈದ್ಯಕೀಯ ಕಾಲೇಜ್ ಗೆ ಅಮೃತ್-2 ಯೋಜನೆಯಡಿ ನೀರು ಪೂರೈಕೆಗೆ ಸಂಬಂಧಿಸಿದಂತೆ ಖರ್ಚು ವೆಚ್ಚದ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳು ಸಲ್ಲಿಸಬೇಕು. ಕಂಪೌಂಡ್ ಗೋಡೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅಕ್ರಮ ಗಣಿಗಾರಿಕೆ, ಮರಳು ಸಾಗಾಣಿಕೆ ಬಗ್ಗೆ ನಿಗಾವಹಿಸಬೇಕು. ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಪಿಎಮ್ ಜಿಎಸ್ ವಾಯ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ, ಕಂದಕೂರ, ರಾಜಾವೇಣುಗೋಪಾಲ್ ನಾಯಕ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಡಿ.ಸಿ ಡಾ.ಸುಶೀಲಾ.ಬಿ, ಜಿ.ಪಂ ಸಿಇಓ ಲವೀಶ ಒರಡಿಯಾ, ಎಸ್.ಪಿ ಪೃಥ್ವಿಕ್ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಉಪಸ್ಥಿತರಿದ್ದರು.

ಕೆಡಿಪಿ ಸಭೆಯಲ್ಲಿ ಎಂಎಲ್ಎ, ಎಂಎಲ್ಸಿಗಳಿಗೆ ಆಸನದ ಕೊರತೆ:

ಸಭೆಯಲ್ಲಿ ಎಂಎಲ್ಎ, ಎಂಎಲ್ಸಿಗಳಿಗೆ ಕುಳಿತುಕೊಳ್ಳಲು ಆಸನದ ಕೊರತೆ ಉಂಟಾಗಿತ್ತು. ನಾವು ಒಂದು ಕಾಲು ಒಳಗೆ, ಹೊರಗೆ ಇಟ್ಟು ಕುಳಿತು ಸಾಕಾಗಿದೆ. ಸಭೆಯಲ್ಲಿ ಮುಂದಿನ ಸಲ ಕೆಳಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿಗಳನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ತರಾಟೆಗೆ ತೆಗದುಕೊಂಡ ಘಟನೆ ನಡೆಯಿತು. ಬಳಿಕ ಮತ್ತೊಂದು ಟೇಬಲ್ ವ್ಯವಸ್ಥೆ ಮಾಡಿದ ನಂತರ ಟೇಬಲ್ ಬಳಿ ಕುಳಿತು ಸಭೆ ಆಲಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News