ಯಾದಗಿರಿ | ಯಾವುದೇ ರೈತರ ಭೂಮಿ ವಕ್ಫ್‌ಗೆ ವರ್ಗಾವಣೆಯಾಗಿಲ್ಲ : ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ : ʼಯಾದಗಿರಿಯಲ್ಲಿ ಯಾವುದೇ ರೈತರ ಭೂಮಿ ವಕ್ಫ್‌ಗೆ ವರ್ಗಾವಣೆಯಾಗಿಲ್ಲʼ ಎಂದು ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಸ್ಪಷ್ಟನೆ ನೀಡಿದ್ದಾರೆ.
ವಕ್ಫ್ ಬೋರ್ಡ್ ಸುದ್ದಿ ವಿಚಾರವಾಗಿ ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಬೆಂಕಿ ಹಚ್ಚುವ ಗುಣ ಅವರು ಮೊದಲಿನಿಂದಲೂ ಅನುಸರಿಸಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ರೈತರ ಭೂಮಿಯನ್ನು ವರ್ಗಾಯಿಸಿದರೆ, ಅದಕ್ಕೆ ಸೂಕ್ತವಾದ ಕ್ರಮ ಕೋರ್ಟ್ ನಿರ್ಧರಿಸಲಿದೆ. ಯಾದಗಿರಿಯಲ್ಲಿ ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ರೈತರ ಹೆಸರಿನಿಂದ ವಕ್ಫ್ ಬೋರ್ಡ್‌ಗೆ ವರ್ಗಾವಣೆ ಎನ್ನಲಾದ ಸುದ್ದಿ ಸುಳ್ಳುʼ ಎಂದರು.
ʼಸತ್ಯಾಸತ್ಯತೆಗಳನ್ನು ಕೋರ್ಟ್ ತೀರ್ಮಾನ ಮಾಡಲಿದೆ. ವಿಜಯಪುರದಲ್ಲಿ ಹಿಂದೆ ಹಾಗೂ ಈಗ ಬಿಜೆಪಿಯ ಶಾಸಕರೇ ಇದ್ದಾರೆ. ಹಿಂದೆ ಬಿಜೆಪಿಯದ್ದೇ ಸರಕಾರ ಇತ್ತಲ್ವ, ಆಗ ಯಾವುದೇ ರೈತರ ಭೂಮಿ ವರ್ಗಾವಣೆ ಆಗಲಿಲ್ಲವೇ, ಬಿಜೆಪಿಯವರಿಗೆ ರೈತರ ಭೂಮಿ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲʼ ಎಂದು ವಗ್ದಾಳಿ ನಡೆಸಿದರು.