ಯಾದಗಿರಿ | ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
ಯಾದಗಿರಿ : ಸುರಪುರ ನಗರದಲ್ಲಿ ಆಟೋಗಳನ್ನು ನಿಲ್ಲಿಸಲು ಸರಿಯಾದ ವ್ಯವಸ್ಥೆ ಕಲ್ಪಿಸದೆ ಚಾಲಕರಿಗೆ ಅಲ್ಲಿ ನಿಲ್ಲಿಸಬೇಡಿ, ಇಲ್ಲಿ ನಿಲ್ಲಿಸಬೇಡಿ ಎಂದು ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಆಟೋ ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಶೋಷಿತರ ಪರ ಹೋರಾಟ ಸಂಘಟನೆಯ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ ಆಗ್ರಹಿಸಿದ್ದಾರೆ.
ಒಕ್ಕೂಟದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ತನಿಖೆ ನಡೆಸಬೇಕು. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಬೇಡಿಕೆ ಇದ್ದು ಕೂಡಲೇ ಇತ್ಯರ್ಥ ಮಾಡಬೇಕು. ಜೆಸ್ಕಾಂ ಇಲಾಖೆಯ ಜೆ.ಇ ಶಾಂತಪ್ಪ ಅವರು ನಿರಂತರ ಜ್ಯೋತಿ ಮತ್ತು ಇತರೆ ಯೋಜನೆಗಳು ಸರಿಯಾಗಿ ಜಾರಿಗೊಳಿಸಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಅನೇಕ ಹಳ್ಳಿಗಳಲ್ಲಿ ಜಲಜೀವನ ಮಿಷನ್ ಯೋಜನೆ ಕಾಮಗಾರಿಗಳು ಕಳಪೆಯಾಗಿದ್ದು ತನಿಖೆ ನಡೆಸಬೇಕು. ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ದಿಂದ ಹನುಮಾನ ಟಾಕೀಸ್ ರಸ್ತೆ ದುರಸ್ತಿಗೊಳಿಸಬೇಕು. 2013 ರಿಂದ ಮಂಜೂರಾಗಿರುವ ವಾಲ್ಮೀಕಿ ಭವನಗಳನ್ನು ನಿರ್ಮಾಣ ಮಾಡಿಲ್ಲ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಹಸನಾಪುರ ಕಾಡಾ ಉಪ ವಿಭಾಗದ ಕಾಮಗಾರಿಗಳು ನಿಯಮಾನುಸಾರ ಮಾಡಿದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಬೇಡಿಕೆಗಳ ಈಡೇರಿಸದಿದ್ದಲ್ಲಿ ನ.11 ರಂದು ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಸರಕಾರದ ಕಾರ್ಯದರ್ಶಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಗುರುಬಸಪ್ಪ ಪಾಟೀಲ್ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರಾಜು ದರಬಾರಿ, ಜಯಕರ್ನಾಟಕ ಸಂಘದ ತಾ.ಅಧ್ಯಕ್ಷ ಯಲ್ಲಪ್ಪ ನಾಯಕ ಕಬಾಡಗೇರ, ಜಯ ಕರ್ನಾಟಕ ಆಟೋ ಚಾಲಕರ ಘಟಕದ ಅಧ್ಯಕ್ಷ ವೆಂಕಟೇಶ, ಹಣಮಂತ್ರಾಯ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.