ಮಹಿಳೆಯರ ವಿರುದ್ಧ ನ್ಯಾಯಮೂರ್ತಿಯಿಂದ ಆಕ್ಷೇಪಾರ್ಹ ಹೇಳಿಕೆ: ಹಲವು ಸಂಘಟನೆಗಳಿಂದ ಸುರಪುರ ತಾಲ್ಲೂಕು ಬಂದ್ ಮಾಡಿ ಪ್ರತಿಭಟನೆ
ಯಾದಗಿರಿ : ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ನ್ಯಾಯಾಲಯದ ಕಲಾಪದ ವೇಳೆ ಆಕ್ಷೇಪಾರ್ಹ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಇದನ್ನು ಖಂಡಿಸಿ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಸುರಪುರ ಬಂದ್ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸುರಪುರ ನಾಯಕರ ಹಾಗೂ ಮಹಿಳೆಯರ ಬಗ್ಗೆ ಉನ್ನತ ಸ್ಥಾನದಲ್ಲಿರುವ ನ್ಯಾಯಮೂರ್ತಿ ಅವರು, ʼಹಳೆಯ ಶಿಲಾಯುಗದ ಕಾಲದಲ್ಲಿ ಹೆಣ್ಣು ಮಕ್ಕಳಿಗೋಸ್ಕರ ಕಾದಾಟಗಳು ನಡೆದಿದ್ದು, ಹೆಣಗಳು ಬೀಳುತ್ತಿದ್ದವು. ಯಾರಿಗೆ ಶಕ್ತಿ ಇತ್ತೋ ಅವನು ನಾಯಕನಾಗುತ್ತಿದ್ದ. ಆ ನಾಯಕನಿಗೆ ಆ ಹೆಣ್ಣು ಮಗಳನ್ನು ಒಪ್ಪಿಸಿ, ಉಳಿದವರು ಎರಡು ಅಥವಾ ಮೂರನೆಯವರಾಗಿ ಆ ಹೆಣ್ಣು ಮಗಳನ್ನು ಉಪಯೋಗಿಸಿಕೊಳ್ಳಬೇಕಿತ್ತು. ಈ ದುಷ್ಟ ಆಚರಣೆ ಈಗಲೂ ಸುರಪುರದಲ್ಲಿದೆʼ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಖಂಡಿಸಿ, ನ್ಯಾಯಾಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಗಳು, ಸೋಮವಾರ ನಗರದ ಗರುಡಾದ್ರಿ ಕಲಾ ಮಂದಿರ ಆವರಣದಿಂದ ರಂಗಂಪೇಟ ತಿಮ್ಮಾಪುರ ಮಾರ್ಗವಾಗಿ ಹಸನಾಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದವರೆಗೆ ಪಾದಯಾತ್ರೆಯ ಮೂಲಕ ತೆರಳಿ, ಸಾಮೂಹಿಕ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ರಾಷ್ಟ್ರಪತಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಯವರಿಗೆ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ರಾಜಾ ಲಕ್ಷ್ಮೀನಾರಾಯಣ, ರಾಜಾ ಮುಕುಂದ ನಾಯಕ, ರಾಜಾ ಸಂತೋಷ್ ನಾಯಕ ಅವರು ಸಲ್ಲಿಸಿದರು.
ಪ್ರಕರಣದ ವಿಚಾರಣೆಯಲ್ಲಿ ಸುರಪುರ ನಾಯಕರ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಬಹಳ ಹಗುರವಾಗಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯ ಪೀಠದ ನ್ಯಾಯಮೂರ್ತಿ ವೇದವ್ಯಾಸಚಾರ್ಯ ಶ್ರೀಶಾನಂದ ಅವರು ಮಾತನಾಡಿದ್ದಾರೆ. ಕೂಡಲೇ ಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಮಾಜಿ ಸಚಿವರು ನ್ಯಾಯಮೂರ್ತಿ ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕು ಹಾಗೂ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ವೇಣುಗೋಪಾಲ್ ಜೇವರ್ಗಿ, ಉಪೇಂದ್ರ ನಾಯಕ, ಸೂಗರೇಶ ವಾರದ್, ಅಹ್ಮದ್ ಪಠಾಣ, ಭೀಮುನಾಯಕ ಯಾದಗಿರಿ, ಬಸವರಾಜ ಪಡಕೋಟಿ, ದೇವಿಂದ್ರಪ್ಪಗೌಡ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗೋಲ್ ಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಮಹಾಸ್ವಾಮಿಗಳು, ಮಸ್ಕಿಯ ಬ್ರಹ್ಮಾನಂದ ಸ್ವಾಮಿಗಳು ಲಕ್ಷ್ಮೀಪುರದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ , ಭೀಮನಗೌಡ ಲಕ್ಷ್ಮೀ ಹೆಮನೂರ, ಸೋಮನಾಥ ಡೊಣ್ಣಿಗೇರಿ, ಗಂಗಾಧರ ನಾಯಕ ತಿಂಥಣಿ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಭೀಮು ನಾಯಕ ಮಲ್ಲಿಭಾವಿ, ಹಣಮಂತ ಕಟ್ಟೀಮನಿ, ಸಚಿನ್ ನಾಯಕ, ವೆಂಕಟೇಶ ಬೈರಮರಡಿ, ನಾಗಣ್ಣ ಕಲ್ಲದೇವನಹಳ್ಳಿ, ಅಬ್ದುಲ್ ಗಫಾರ್ ನಗನೂರಿ, ಮಹಿಬೂಬ ಒಂಟಿ, ಆದಪ್ಪ ಹೊಸಮನಿ, ವೆಂಕಟೇಶ ಹೊಸಮನಿ, ನಾಗರಾಜ ನಾಯಕ, ಮಹ್ಮದ್ ಗೌಸ್ ಕಿಣ್ಣಿ, ಲಿಯಾಖತ್, ದೇವಿಂದ್ರಪ್ಪ ನಾಯಕ, ಶಿವಮೋನಯ್ಯ ನಾಯಕ ದೇವರ ಗೋನಾಲ,ರಾಹುಲ್ ಹುಲಿಮನಿ, ಶಿವರಾಜ್ ನಾಯಕ, ಮಲ್ಲು ವಿಷ್ಣು ಸೇನಾ, ಶೆಟ್ಟಿ ಬಾಬು, ಅಬೀದ್ ಹುಸೇನ್, ದಾನಪ್ಪ ಲಕ್ಷ್ಮೀಪುರ, ಹರೀಶ್ ತ್ರಿವೇದಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.